ವೈದ್ಯೆ ಅತ್ಯಾಚಾರ ಪ್ರಕರಣ: ಆರೋಪಿ ಸಂಜಯ್ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಯು-ಟರ್ನ್! 'ನಾನು ಅಲ್ಲಿಗೆ ಹೋಗುವ ವೇಳೆಗೆ..'

CBI
Published on

ಕೋಲ್ಕತ್ತಾ: 'ತಾನು ಆರ್​ಜೆ ಕರ್​ ಆಸ್ಪತ್ರೆ ಸೆಮಿನಾರ್ ಹಾಲ್‌ಗೆ ಬರುವಷ್ಟರಲ್ಲಿ ಸಂತ್ರಸ್ತೆ ಮೃತಪಟ್ಟಿದ್ದಳು ಎಂದು ಸುಳ್ಳು ಪತ್ತೆ (ಪಾಲಿಗ್ರಾಫ್​) ಪರೀಕ್ಷೆಯ ವೇಳೆ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಶಂಕಿತ ಸಂಜಯ್ ರಾಯ್ ಹೇಳಿದ್ದಾನೆ.

ರಾಯ್ ಆರಂಭದಲ್ಲಿ ಅಪರಾಧವನ್ನು ಒಪ್ಪಿಕೊಂಡಿದ್ದು, ಕೆಲವು ದಿನಗಳ ನಂತರ ಆ.25(ಭಾನುವಾರ)ಈ ಪರೀಕ್ಷೆಯನ್ನು ನಡೆಸಲಾಯಿತು. ಈಗ ಯೂ ಟರ್ನ್​ ಹೊಡೆದಿದ್ದು, ಪ್ರಕರಣದ ತನಿಖೆ ದಾರಿ ತಪ್ಪುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.

ಪರೀಕ್ಷೆಯ ಸಮಯದಲ್ಲಿ ಆರೋಪಿ ರಾಯ್ ನಿರಾತಂಕವಾಗಿ ಕಾಣಿಸಿಕೊಂಡಿದ್ದಾನೆ. ಆಸ್ಪತ್ರೆಗೆ ತಾನು ತಲುಪುವ ವೇಳೆಗೆ ವೈದ್ಯೆ ಮೃತಪಟ್ಟಿದ್ದು, ಭಯಪಟ್ಟು ಸ್ಥಳದಿಂದ ಓಡಿಹೋಗಿದ್ದಾಗಿ ಸಿಬಿಐ ಅಧಿಕಾರಿಗಳ ಎದುರು ಹೇಳಿಕೊಂಡಿದ್ದಾನೆ.

ಈ ಹೇಳಿಕೆಯು ಕೋಲ್ಕತ್ತಾ ಪೊಲೀಸರಿಗೆ ಘಟನೆ ನಡೆದ ಪ್ರಾರಂಭದಲ್ಲಿ ನೀಡಿದ್ದ ತಪ್ಪೊಪ್ಪಿಗೆಗೆ ವ್ಯತಿರಿಕ್ತವಾಗಿದೆ. ಈ ಹಿಂದೆ ಆತ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಆದರೆ ಸಿಬಿಐ ತನಿಖೆಯಲ್ಲಿ ಯೂ ಟರ್ನನ ಹೊಡೆದಿದ್ದಾನೆ. ಈ ಹಿಂದೆ ಆತ ನ್ಯಾಯಾಲಯದಲ್ಲಿ ಮಾತನಾಡುವಾಗ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದ. ಅಗತ್ಯವಾದರೆ ತನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವ ಇಚ್ಛೆ ವ್ಯಕ್ತಪಡಿಸಿದ್ದ.

ರಾಯ್​ನ ಹೇಳಿಕೆಗಳ ಹೊರತಾಗಿಯೂ, ಸಿಬಿಐ ಮತ್ತು ಪೊಲೀಸರು ಅವನ ಕಟ್ಟುಕಥೆಗಳಲ್ಲಿ ಹಲವಾರು ವಿರೋಧಾಭಾಸಗಳನ್ನು ಕಂಡುಕೊಂಡಿದ್ದಾರೆ. ರಾಯ್ ತನಿಖೆಯನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಸ್ಟ್ 9 ರಂದು ಮುಂಜಾನೆ 4ಗಂಟೆಗೆ ಆಸ್ಪತ್ರೆ ಆವರಣಕ್ಕೆ ರಾಯ್ ಪ್ರವೇಶಿಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಇದಕ್ಕೆ ಪೂರಕವಾಗಿ ರಾಯ್‌ಗೆ ಸೇರಿದ ಬ್ಲೂಟೂತ್ ಹೆಡ್‌ಸೆಟ್ ಸ್ಥಳದಲ್ಲಿ ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net