3 ತಿಂಗಳಲ್ಲಿ 19 ಕೋಟಿ ರೂ. ವಂಚನೆ! 'ಡಿಜಿಟಲ್ ಅರೆಸ್ಟ್'​ಗೆ ಸಿಲುಕಿದ ವೈದ್ಯೆ ಕಣ್ಣೀರು, ಓರ್ವ ಬಂಧನ | Digital Arrest

ವಿಜಯವಾಣಿ - 2025-07-29T103301.456
Published on

Digital Arrest: ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾಮಾನ್ಯ ಜನರು ಮಾತ್ರವಲ್ಲದೇ ವಿದ್ಯಾವಂತರು ಕೂಡ ಈ ವಂಚನೆಯ ಜಾಲಕ್ಕೆ ಸುಲಭವಾಗಿ ಸಿಲುಕುತ್ತಿದ್ದಾರೆ. ಅದರಲ್ಲೂ ಇಲ್ಲೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸೈಬರ್ ಕ್ರೈಂ ಅಪರಾಧಿಗಳ ಜಾಲಕ್ಕೆ ಸಿಕ್ಕಿಬಿದ್ದ ವೈದ್ಯೆ, ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 19 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಆನ್​ಲೈನ್​ ವಂಚಕ ತೊಂದರೆಯನ್ನು ಸಹಿಸಲಾಗದ ವೈದ್ಯೆ, ಮೂರು ತಿಂಗಳ ಬಳಿಕ ಸೂರತ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಡಿಜಿಟಲ್ ಅರೆಸ್ಟ್ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಯನ್ನು ಬಂಧಿಸುವಲ್ಲಿ ಕಡೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ವರ್ಷದ ಮಾರ್ಚ್ 15ರಿಂದ ಜೂನ್ 25 ರವರೆಗೆ ಅಂದರೆ ಮೂರು ತಿಂಗಳಲ್ಲಿ ಸೈಬರ್ ಅಪರಾಧಿಗಳು ವೈದ್ಯೆಯಿಂದ ಬರೋಬ್ಬರಿ 19.25 ಕೋಟಿ ರೂ. ಹಣವನ್ನು ದೋಚಿದ್ದಾರೆ. ಪೊಲೀಸರ ಪ್ರಕಾರ, ಮಾರ್ಚ್ 15ರಂದು ದೂರಸಂಪರ್ಕ ಇಲಾಖೆಯ ಜ್ಯೋತಿ ವಿಶ್ವನಾಥ್ ಎಂಬ ಮಹಿಳೆಗೆ ಒಂದು ಫೋನ್ ಕರೆ ಬಂದಿತು. ಈ ವೇಳೆ ಕಾಲ್​ನಲ್ಲಿದ್ದವರು ಆಕ್ಷೇಪಾರ್ಹ ವಿಷಯವನ್ನು ಹೇಳಿದ್ದಾರೆ. ತಕ್ಷಣವೇ ಫೋನ್ ಕಟ್​ ಮಾಡಿದ ಮಹಿಳೆ ಸುಮ್ಮನಾಗಿದ್ದರು. ಆದರೆ, ಮತ್ತೊಂದು ಕರೆಯಲ್ಲಿ, ನಿನ್ನ ವಿರುದ್ಧ ಹಣ ವರ್ಗಾವಣೆ ಪ್ರಕರಣ ದಾಖಲಿಸುವುದಾಗಿ ಕಿಡಿಗೇಡಿಗಳು ಬೆದರಿಕೆ ಹಾಕಿದ್ದರು.

ಈ ಘಟನೆ ನಡೆದ ಮರುದಿನವೇ ವೈದ್ಯೆಗೆ ಸಬ್ಇನ್ಸ್ಪೆಕ್ಟರ್, ಸರ್ಕಾರಿ ವಕೀಲರು ಮತ್ತು ನೋಟರಿ ಅಧಿಕಾರಿಯ ಹೆಸರಿನಲ್ಲಿ ವಾಟ್ಸಾಪ್ ಮತ್ತು ಸ್ಕೈಪ್ ಕರೆಗಳ ಮೂಲಕ ಬೆದರಿಕೆಗಳು ಬಂದಿತು. ವೈದ್ಯೆಯನ್ನು ಡಿಜಿಟಲ್ ರೂಪದಲ್ಲಿ ಬಂಧಿಸಲಾಯಿತು. ಆಕೆಯ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಾಗಿದ್ದು, ಅದನ್ನು ತಪ್ಪಿಸಲು ನಾವು ಹೇಳಿದಂತೆ ಮಾಡಬೇಕು ಎಂದು ವಂಚಕರು ವೈದ್ಯೆಯನ್ನು ತಮ್ಮ ಮುಷ್ಠಿಯಲ್ಲಿ ಹಿಡಿದರು.

ನಾವು ಹೇಳಿದ್ದನ್ನು ಕೇಳದಿದ್ದರೆ, ನೀವು ದೊಡ್ಡ ಅಪಾಯದಲ್ಲಿ ಸಿಲುಕುವಂತ ಪರಿಸ್ಥಿತಿ ಎದುರಾಗಲಿದೆ ಎಂದು ಬ್ಯಾಕ್ ಟು ಬ್ಯಾಕ್​ ಕರೆಗಳು ಮತ್ತು ಬೆದರಿಕೆಗಳನ್ನು ಹಾಕಿದ್ದರು. ಅವರ ನಿರಂತರ ಬೆದರಿಕೆ, ಆಮಿಷಗಳಿಗೆ ಸಿಕ್ಕಿಬಿದ್ದ ವೈದ್ಯೆ, ವಂಚಕರು ಹೇಳಿದಂತೆ ಕೇಳುವುದಾಗಿ ಒಪ್ಪಿಕೊಂಡರು. ಕೇವಲ ಮೂರು ತಿಂಗಳಲ್ಲಿ 35 ವಿವಿಧ ಬ್ಯಾಂಕ್ ಖಾತೆಗಳಿಗೆ 19.25 ಕೋಟಿ ರೂ. ಹಣವನ್ನು ವೈದ್ಯೆ ವರ್ಗಾಯಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಈ ಕೇಸ್​ ಕುರಿತು ಎಲ್ಲೂ ಬಾಯ್ಬಿಡುವಂತಿಲ್ಲ. ಎಷ್ಟು ಗೌಪ್ಯವಾಗಿಟ್ಟು, ತನಿಖೆ ಸಹಕರಿಸುತ್ತೀರೋ ಅದು ಒಳ್ಳೆಯದು ಎಂದು ಹೆದರಿಸಿದ್ದಾರೆ. ಇದರೊಂದಿಗೆ ಆಕೆಯಿಂದ ಪಡೆದ ಹಣವೆಲ್ಲ ಸರ್ಕಾರದ ಬಳಿ ತಾತ್ಕಾಲಿಕವಾಗಿ ಇರಲಿದೆ. ಕೇಸ್​ ಇತ್ಯರ್ಥವಾದ ಬಳಿಕ ನಿಮಗೆ ವಾಪಾಸ್​ ಸಿಗಲಿದೆ ಎಂದು ತಿಳಿಸಿದ್ದಾರೆ. ವಂಚಕರ ಈ ಮಾತನ್ನು ನಂಬಿದ ವೈದ್ಯೆ, ತಮ್ಮ ಬಳಿಯಿದ್ದ ಚಿನ್ನಾಭರಣಗಳು, ಲಾಕರ್‌ಗಳಲ್ಲಿ ಇರಿಸಿದ್ದ ಗೋಲ್ಡ್​ ಮತ್ತು ಒಂದು ದುಬಾರಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಕಿಡಿಗೇಡಿಗಳ ಖಾತೆಗೆ ವರ್ಗಾಯಿಸಿದ್ದರು.

ಜುಲೈ 16ರಂದು ಪೊಲೀಸ್​ ಠಾಣೆಯಲ್ಲಿ ಈ ಪ್ರಕರಣ ಸಂಬಂಧ ದೂರು ದಾಖಲಾದ ಬೆನ್ನಲ್ಲೇ ಗುಜರಾತ್‌ನ ಸಿಐಡಿ ಅಪರಾಧ ಸೈಬರ್ ಸೆಲ್ ಅಧಿಕಾರಿಗಳು ವೈದ್ಯೆ ಕೇಸ್​ನ ತನಿಖೆ ಕೈಗೆತ್ತಿಕೊಂಡಿತು. ಈ ಪ್ರಕ್ರಿಯೆಯಲ್ಲಿ, ಪೊಲೀಸರು ಓರ್ವ ಆರೋಪಿಯನ್ನು ಈಗಾಗಲೇ ಬಂಧಿಸಿದ್ದು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಆತನ ಬ್ಯಾಂಕ್ ಖಾತೆಯಲ್ಲಿ 1 ಕೋಟಿ ರೂ. ನಗದು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಪೂರ್ಣ ಕಾರ್ಯಾಚರಣೆಯ ಹಿಂದೆ ಯಾರೆಲ್ಲಾ ಇದ್ದಾರೆ ಎಂಬ ವಿವರಗಳನ್ನು ಸಂಗ್ರಹಿಸಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net