ಮುಂದಿನ 10-12 ದಿನಗಳಲ್ಲಿ... ಪುಟಿನ್​ ವಿರುದ್ಧ ಟ್ರಂಪ್​ ಗುಡುಗು! ಕೊಟ್ಟಿರುವ ಡೆಡ್​ಲೈನ್​ ತಪ್ಪದಿರಲು ಸೂಚನೆ | Donald Trump

ವಿಜಯವಾಣಿ - 2025-07-29T074042.833
Published on

Donald Trump: ಇತರೆ ದೇಶಗಳ ನಡುವಿನ ಯುದ್ಧ ಸಂಘರ್ಷಗಳನ್ನು ಕದನ ವಿರಾಮ ಘೋಷಿಸುವ ಮೂಲಕ ಒಪ್ಪಂದಕ್ಕೆ ಸಹಿ ಹಾಕಿಸಲು ಶತಾಯಗತಾಯ ಪ್ರಯತ್ನಕ್ಕಿಳಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​, ಇದೀಗ ರಷ್ಯಾ ವಿರುದ್ಧ ತಿರುಗಿಬಿದ್ದಿದ್ದಾರೆ.

ಕಳೆದ ವರ್ಷಗಳಿಂದ ಯುಕ್ರೇನ್​ ಮೇಲೆ ತೀವ್ರ ಯುದ್ಧ ದಾಳಿ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​, ಯುದ್ಧವನ್ನು ಕೈಬಿಡುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ರಷ್ಯಾ ನಿರಂತರ ದಾಳಿಯಿಂದ ಭಾಗಶಃ ತತ್ತರಿಸಿ ಹೋಗಿರುವ ಯುಕ್ರೇನ್​ಗೆ ಸಹಾಯಹಸ್ತದ ಅಗತ್ಯ, ಅನಿವಾರ್ಯತೆ ಎದುರಾಗಿದೆ. ಇದೇ ಸಮಯಕ್ಕೆ ಟ್ರಂಪ್​ ಮಧ್ಯಸ್ಥಿಕೆ ವಹಿಸಿದ್ದು, ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಯುದ್ಧವನ್ನು ನಿಲ್ಲಿಸುವ ಭರವಸೆ ನೀಡಿದ್ದಾರೆ.

ಈ ಹಿಂದೆಯೇ ರಷ್ಯಾಗೆ ಖಡಕ್ ಎಚ್ಚರಿಕೆ ರವಾನಿಸಿದ್ದ ಟ್ರಂಪ್​, ಶೀಘ್ರವೇ ಯುಕ್ರೇನ್ ಮೇಲಿನ ಯುದ್ಧವನ್ನು ಕೈಬಿಡಬೇಕು. ಇಲ್ಲದೆ ಹೋದರೆ, ರಷ್ಯಾಗೆ ಭಾರೀ ಸುಂಕವನ್ನು ವಿಧಿಸಲಾಗುವುದು. ಶೇ.500ರಷ್ಟು ಹೆಚ್ಚಿಸಿದರೂ ಆಶ್ಚರ್ಯ ಬೇಡ ಎಂದಿದ್ದರು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪುಟಿನ್​ ರಾಷ್ಟ್ರ, ಎಷ್ಟು ಬೇಕಾದರೂ ಸುಂಕ ವಿಧಿಸಿಕೊಳ್ಳಿ ಎಂದು ಟ್ರಂಪ್​ ಮಾತನ್ನು ತಳ್ಳಿಹಾಕಿತ್ತು. ಆದರೀಗ, ಮತ್ತೊಮ್ಮೆ ಕಿಡಿಕಾರಿರುವ ಡೊನಾಲ್ಡ್​ ಟ್ರಂಪ್​, ಮುಂದಿನ 10ರಿಂದ 12 ದಿನಗಳಲ್ಲಿ ಯುದ್ಧ ನಿಲ್ಲಿಸಲೇಬೇಕು ಎಂದು ಎಚ್ಚರಿಸಿದ್ದಾರೆ.

ಟ್ರಂಪ್​ ಸಿಟ್ಯಾಕೆ?

"ಯುಕ್ರೇನ್ ವಿರುದ್ಧದ ಯುದ್ಧವನ್ನು ನಿಲ್ಲಿಸಿ, ಶಾಂತಿ ಒಪ್ಪಂದ ಮಾಡಿಕೊಳ್ಳಲು ರಷ್ಯಾಗೆ ಮುಂದಿನ 10ರಿಂದ 12 ದಿನಗಳು ಮಾತ್ರ ಬಾಕಿಯಿದೆ" ಎಂಬ ಹೊಸ ಗಡುವನ್ನು ಅಮೆರಿಕ ಅಧ್ಯಕ್ಷರು ನಿಗದಿಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸ್ಕಾಟ್ಲೆಂಡ್‌ನಲ್ಲಿ ಮಾತನಾಡಿದ ಟ್ರಂಪ್, "ಈ ಹಿಂದೆ 50 ದಿನಗಳ ಡೆಡ್​ಲೈನ್​ ಅನ್ನು ಕೊಡಲಾಗಿತ್ತು. ಆದರೆ, ಪುಟಿನ್​ ನಡೆ ನನಗೆ ಕಿಂಚಿತ್ತು ಹಿಡಿಸುತ್ತಿಲ್ಲ. ಅದು ತೀರ ಕೆರಳಿಸಿದೆ. ಹೀಗಾಗಿ, ಗಡುವನ್ನು 12 ದಿನಗಳಿಗೆ ಇಳಿಸಿದ್ದೇವೆ. ಇನ್ನೂ ಕಾಯುವ ಮಾತಿಲ್ಲ" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net