

ಚಿಕ್ಕಮಗಳೂರು: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶಶಿಕಲಾ ಅವಿನಾಶ್ ಹೇಳಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲೂ ಮಗು ಮಾರಾಟ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ವೈದ್ಯರು ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯ ಎಂದರು.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ತರಗತಿಗಳು ಆರಂಭಗೊಂಡಿದ್ದು ಶಾಲಾ ಕಾಲೇಜುಗಳಲ್ಲಿ ಕರೊನಾ ತಪಾಸಣೆ ಜತೆಗೆ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಶಾಲಾ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಲಾಗಿದ್ದು, ತರಗತಿಗಳನ್ನು ಆರಂಭಿಸುವ ಮುನ್ನ ಮಕ್ಕಳ ಆರೋಗ್ಯದ ಮೇಲೆ ನಿಗಾವಹಿಸಬೇಕು. ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು ಕಳೆದ ಅ.1ರಿಂದಲೇ ಸಾವಿನ ಪ್ರಮಾಣ ತಗ್ಗಿದೆ ಎಂದು ತಿಳಿಸಿದರು.
ಒಂದರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಕಲಿಕಾ ಯೋಜನೆ ರೂಪಿಸಲಾಗಿದೆ. ಮಕ್ಕಳು ಪರಸ್ಪರ ಅಂತರ ಕಾಯ್ದುಕೊಳ್ಳುವ ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮನೆಯಿಂದಲೇ ಊಟ, ಬಿಸಿ ನೀರು ತರುವಂತೆ ಸೂಚಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.