ಆಪರೇಷನ್​ ಥಿಯೇಟರ್​​ನಲ್ಲಿ ಪ್ರೀ ವೆಡ್ಡಿಂಗ್ ಚಿತ್ರೀಕರಣ! ವಿಡಿಯೋ ವೈರಲ್..

pree wedding shoot
Published on

ಚಿತ್ರದುರ್ಗ: ಈಗಂತೂ ಪ್ರೀ ವೆಡ್ಡಿಂಗ್ ಫೋಟೋಶೂಟ್‌ಗಳದ್ದೇ ಕಾರು ಬಾರು. ಮುದುವೆಗೂ ಮುಂಚೆ ಏಕಾಂತ ಸ್ಥಳದಲ್ಲಿ ಪ್ರೇಮಿಗಳಂತೆ ಬಗೆ ಬಗೆಯ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳಲು ಯುವ ಜನತೆ ಹಾತೊರೆಯುತ್ತದೆ. ಇದೊಂದು ಟ್ರೆಂಡಿ ಫೋಟೋಶೂಟ್ ಆಗಿ ವಿಶ್ವ ವ್ಯಾಪಕವಾಗಿದೆ. ಆದರೆ ಆ ಫೋಟೋಶೂಟ್​ ಎಲ್ಲಿ ಮಾಡ್ತೀವಿ ಅನ್ನೋದು ಮುಖ್ಯವಾಗಿದೆ. ಇಲ್ಲೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವೈದ್ಯ ಆಪರೇಷನ್​ ಥಿಯೇಟರ್​ನಲ್ಲಿ ಶೂಟ್​ ಮಾಡಿದ್ದಾನೆ. ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ...

ಆಪರೇಷನ್​ ಥಿಯೇಟರ್​​ನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಡೆಸಿ ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯ ಡಾ.ಅಭಿಷೇಕ್ ಯಡವಟ್ಟು ಮಾಡಿಕೊಂಡಿದ್ದಾರೆ.

ತಾಲೂಕಿನ ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಚಿತ್ರೀಕರಣ ಮಾಡಿದ್ದಾರೆ, ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಹೊರಗುತ್ತಿಗೆ ವೈದ್ಯ ಡಾ. ಅಬಿಷೇಕ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಆದೇಶ ಮಾಡಿದ್ದಾರೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ. ಅಬಿಷೇಕ್ ಅವರು ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕಳೆದ ಫೆಬ್ರವರಿ 07 ರಂದು ಪ್ರೀ ವೆಡ್ಡಿಂಗ್ ಶೂಟ್ ಮಾಡಿರುತ್ತಾರೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ.

ಇಂತಹ ಕಾರ್ಯವು ನಿಯಮ ಬಾಹಿರವಾಗಿದ್ದು, ವೈದ್ಯರು ಕರ್ತವ್ಯ ಲೋಪವೆಸಗಿರುತ್ತಾರೆ. ಹೀಗಾಗಿ ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳ ವರದಿಯನ್ವಯ ಡಾ. ಅಭಿಷೇಕ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ತಿಳಿಸಿದ್ದಾರೆ.

ವಿಡಿಯೋದಲ್ಲಿ ವೈದ್ಯ ಅಭಿಷೇಕ್ ಆಪರೇಷನ್ ಮಾಡುತ್ತಿರುವಂತೆ, ಈ ವೇಳೆ ಆತನಿಗೆ ಭಾವಿ ಪತ್ನಿ ಸಹಾಯ ಮಾಡುವಂತೆ ಚಿತ್ರೀಕರಣ ಮಾಡಲಾಗಿದೆ. ಕೆಲವೇ ಸೆಕೆಂಡ್​ಗಳ ವಿಡಿಯೋ ಕೊನೆಗೆ ಆಪರೇಷನ್​ ಮಾಡಿಸಿಕೊಳ್ಳುತ್ತಿರುವಂತೆ ಮಲಗಿದ್ದ ರೋಗಿ ಎದ್ದು ಕೂರುವುದನ್ನು ಕಾಣಬಹುದಾಗಿದೆ. ಇತ್ತೀಚೆಗೆ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗಳು ಪ್ರೀ ವೆಡ್ಡಿಂಗ್ ಫೋಟೋ ಶೂಟ್​ ಮಾಡುವುದು ಸಾಮಾನ್ಯ ಸಂಗತಿಯಾಗಿದ್ದು, ಹೊಸ ಹೊಸ ಥಿಮ್​​ಗಳೊಂದಿಗೆ ಶೂಟ್​ಗಳನ್ನು ನಡೆಸುವುದನ್ನು ನೋಡುತ್ತಿರುವುತ್ತೇವೆ.

ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯ ಆಪರೇಷನ್ ಥಿಯೇಟರ್​​ಅನ್ನು ದುರ್ಬಳಕೆ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಹಲವು ಪ್ರಶ್ನೆ ಮಾಡ್ತಿದ್ದಾರೆ. ಆಸ್ಪತ್ರೆಯನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net