

ಜೈಪುರ: ವೈದ್ಯರು ಶಸ್ತ್ರಚಿಕಿತ್ಸೆಯ ವೇಳೆ ಕತ್ತರಿಯನ್ನು ದೇಹದೊಳಗೆ ಬಿಟ್ಟಿದ್ದರಿಂದ ರೋಗಿಯು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ ಘಟನೆ ಜೈಪುರದಲ್ಲಿ ನಡೆದಿದೆ.
ನಗರದ ನಿವಾಸಿ ಉಪೇಂದ್ರ ಶರ್ಮಾ (74)ನನ್ನು ಅವರ ಪುತ್ರ ಕಮಲ್, ಮೇ 29ರಂದು ಅನಾರೋಗ್ಯದ ಕಾರಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಮೇ 30ರ ರಾತ್ರಿ 8.30ರ ಸುಮಾರಿಗೆ ರೋಗಿಯನ್ನು ಆಪರೇಷನ್‌ಗೆ ಕರೆದೊಯ್ಯಲಾಯಿತು. ರಾತ್ರಿ 1.30ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮುಗಿದ ಬಳಿಕ ಆಪರೇಷನ್ ಥಿಯೇಟರ್‌ನಿಂದ ಹೊರಗೆ ಕರೆತರಲಾಗಿತ್ತು.
ಇದನ್ನೂ ಓದಿ: ಹನಿಮೂನ್ ದಿನವೇ ಹೆಂಡತಿಯ ರಹಸ್ಯ ಬಯಲು: 7 ವರ್ಷಗಳ ಬಳಿಕ ಆದೇಶ ನೀಡಿದ ಕೋರ್ಟ್…
ರೋಗಿಯನ್ನು ಮೇ 31ರ ಸಂಜೆ ವೇಳೆಗೆ ಡಿಸ್ಚಾರ್ಜ್ ಸಹ ಮಾಡಲಾಗಿತ್ತು. ಮನೆಗೆ ಕರೆತಂದ ಎರಡು ದಿನ ಆರಾಮಾಗಿದ್ದ ರೋಗಿಯು ಆರೋಗ್ಯ ಎರಡ್ಮೂರು ದಿನಗಳಲ್ಲಿ ಹದಗೆಡಲು ಆರಂಭಿಸಿತ್ತು. ಕೂಡಲೇ ಕಮಲ್, ವೈದ್ಯರೊಂದಿಗೆ ಮಾತನಾಡಿ ತನ್ನ ತಂದೆಯ ಆರೋಗ್ಯದ ಸ್ಥಿತಿಯ ಬಗ್ಗೆ ತಿಳಿಸಿದ್ದಾನೆ.
ಈ ವೇಳೆ ವೈದ್ಯರು, ಎಲ್ಲವೂ ಸರಿಯಾಗುತ್ತದೆ. ಚಿಂತಿಸಬೇಡಿ. ಆದರೆ ಪೂರ್ತಿ ಗುಣಮುಖವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು. ವೈದ್ಯರ ಈ ಮಾತಿನ ಬಳಿಕ ಕಮಲ್ ತುಸು ನಿರಾಳನಾಗಿದ್ದ. ಕೊನೆಗೆ, ಶಸ್ತ್ರಚಿಕಿತ್ಸೆಯ 12 ದಿನಗಳ ನಂತರ ಏಕಾಏಕಿ ಆತನ ತಂದೆ ಮೃತಪಟ್ಟಿದ್ದ.
ಈ ವೇಳೆ ಕಮಲ್ ಹಾಗೂ ಕುಟುಂಬಸ್ಥರು ರೋಗಿಯ ಅಂತ್ಯಕ್ರಿಯೆಯನ್ನು ನಡೆಸಿ, ಮರುದಿನ ಬೆಳಿಗ್ಗೆ ಅಸ್ಥಿಯನ್ನು ಸಂಗ್ರಹಿಸಲು ಸ್ಮಶಾನಕ್ಕೆ ಹೋದಾಗ ಅವರಿಗೆ ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾಗುವ ಕತ್ತರಿ ಸಿಕ್ಕಿದೆ. ಕೂಡಲೇ ಈ ಕುರಿತು ಕುಟುಂಬದವರು ಆಸ್ಪತ್ರೆಯನ್ನು ಸಂಪರ್ಕಿಸಿದಾಗ, ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಇದೀಗ ಮೃತನ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಜವಾಹರ್ ಸರ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.(ಏಜೆನ್ಸೀಸ್)