ಹಾವುಗಳಿಗೆ ಹಾಲುಣಿಸಿದರೆ ಸಾಯಬಹುದು: ವಿಜ್ಞಾನ ಹೇಳುತ್ತೆ ಅವುಗಳಿಗಿರುವ ಏಕೈಕ ದ್ರವ ಇದೊಂದೆ... Snakes

Snakes
Published on

Snakes : ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಾವುಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ನಾಗರಹಾವನ್ನು ದೇವರ ಸ್ವರೂಪವೆಂದು ಪರಿಗಣಿಸುತ್ತಾರೆ. ಹೀಗಾಗಿ ನಾಗಪಂಚಮಿಯಂತಹ ಹಬ್ಬದ ಸಮಯದಲ್ಲಿ ಹಾವಿನ ಹುತ್ತಕ್ಕೆ ಹಾಲೆರೆಯುತ್ತಾರೆ. ನಾಗರ ಪಂಚಮಿ ಬಂದರೆ ಸಾಕು, ಮಹಿಳೆಯರು ಮನೆಯನ್ನು ತೊಳೆದು, ಪೂಜೆ ಮಾಡಿ ತಮ್ಮ ಹತ್ತಿರದ ದೇವಸ್ಥಾನಕ್ಕೆ ತೆರಳಿ ಹುತ್ತಕ್ಕೆ ಅಥವಾ ನಾಗರ ಕಲ್ಲಿಗೆ ಹಾಲೆರೆಯುತ್ತಾರೆ. ತಲೆಮಾರುಗಳಿಂದಲೂ ಈ ನಂಬಿಕೆಯನ್ನು ನಾವು ಆಚರಿಸಿಕೊಂಡು ಬರುತ್ತಲೇ ಇದ್ದೇವೆ.

ನಂಬಿಕೆ ಹಿನ್ನೆಲೆಯಲ್ಲಿ ಹಾವಿಗೆ ಹಾಲೆರೆಯುವುದೇನೋ ಸರಿ ಆದರೆ, ವೈಜ್ಞಾನಿಕವಾಗಿ ಇದು ಎಷ್ಟು ಸತ್ಯ ಎಂಬ ಪ್ರಶ್ನೆ ಮೂಡುತ್ತದೆ. ಅಲ್ಲದೆ, ಹಾವುಗಳು ಹಾಲು ಕುಡಿಯಬಹುದೇ? ಹಾಲು ಹಾವಿಗೆ ಅಪಾಯಕಾರಿ ಆಗುವುದಿಲ್ಲವೇ? ಎಂಬ ಪ್ರಶ್ನೆಗಳು ಕೂಡ ಮೂಡುತ್ತವೆ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.

ಹಾವುಗಳಿಗೆ ಹಾಲು ಕೊಡುವುದು ಸಾಮಾನ್ಯವಾಗಿ ಸಾಂಸ್ಕೃತಿಕ ನಂಬಿಕೆಯಾಗಿದೆ. ಆದರೆ, ವಾಸ್ತವದಲ್ಲಿ ಹಾವುಗಳು ಹಾಲು ಕುಡಿಯುವುದೇ ಇಲ್ಲ. ವೈಜ್ಞಾನಿಕವಾಗಿ ಹೇಳುವುದಾದರೆ, ಹಾವುಗಳು ಸಸ್ತನಿಗಳಲ್ಲ, ಸರೀಸೃಪ ಕುಟುಂಬಕ್ಕೆ ಸೇರಿವೆ. ಅವುಗಳ ಜೀರ್ಣಾಂಗ ವ್ಯವಸ್ಥೆಯು ಹಾಲನ್ನು ಜೀರ್ಣಿಸಿಕೊಳ್ಳುವ ರೀತಿ ಮಾಡಿಲ್ಪಟ್ಟಿಲ್ಲ.

ಹಾಲಿನಲ್ಲಿ ಕಂಡುಬರುವ ಲ್ಯಾಕ್ಟೋಸ್ ಅಂಶವನ್ನು ಜೀರ್ಣಿಸಿಕೊಳ್ಳಲು ಅಗತ್ಯವಿರುವ ಕಿಣ್ವ ಲ್ಯಾಕ್ಟೇಸ್ ಅನ್ನು ಹಾವುಗಳು ಹೊಂದಿರುವುದಿಲ್ಲ. ಆದ್ದರಿಂದ, ಹಾವನ್ನು ಹಾಲು ಕುಡಿಯಲು ಒತ್ತಾಯಿಸಿದರೆ, ಜೀರ್ಣಕಾರಿ ಸಮಸ್ಯೆಗಳು, ನಿರ್ಜಲೀಕರಣ ಮತ್ತು ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಹಾವು ಸಾಯಬಹುದು.

ಇನ್ನು ಹಬ್ಬಗಳ ಸಮಯದಲ್ಲಿ ಹಾಲೆರೆದರು ಹಾವುಗಳು ಅದನ್ನು ಕುಡಿಯುವುದಿಲ್ಲ. ಆದರೆ, ಕೆಲವೊಮ್ಮೆ ಹಸಿವಿನಿಂದಾಗಿ ಬೇರೆ ದಾರಿಯಿಲ್ಲದೇ ಹಾಲು ಕುಡಿಯುವುದರಿಂದ ಹಾವುಗಳು ದುರ್ಬಲವಾಗಬಹುದು. ಕೆಲವೊಮ್ಮೆ ಬಾಯಾರಿಕೆ ನೀಗಿಸಲು ನೀರಿನ ಬದಲು ಹಾಲು ಕುಡಿಯಬಹುದು. ಆದಾಗ್ಯೂ, ಹಾಲು, ಹಾವಿನ ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ.

ಇನ್ನು ಹಾವುಗಳು ಮಾಂಸಾಹಾರಿಗಳು ಮತ್ತು ಅವುಗಳ ನೈಸರ್ಗಿಕ ಆಹಾರ ಕಪ್ಪೆಗಳು, ಇಲಿಗಳು ಮತ್ತು ಸಣ್ಣ ಪಕ್ಷಿಗಳು. ಅದನ್ನು ಹೊರತುಪಡಿಸಿ ನೀರು ಹಾವುಗಳಿಗೆ ಇರುವ ಏಕೈಕ ಸುರಕ್ಷಿತ ದ್ರವವಾಗಿದೆ.

ಹಾವುಗಳು ಹಾಲು ಕುಡಿಯುತ್ತವೆ ಎಂಬ ಕಲ್ಪನೆಯು ಕೇವಲ ಒಂದು ಸಾಂಸ್ಕೃತಿಕ ಪುರಾಣ ನಂಬಿಕೆಯಾಗಿದೆ. ನಮ್ಮ ಭಕ್ತಿಯನ್ನು ತೋರಿಸಲು ಅವುಗಳ ಮೇಲೆ ಹಾಲನ್ನು ಸುರಿಯುವ ಬದಲು, ಅವುಗಳ ನೈಸರ್ಗಿಕ ಆಹಾರ ಪದ್ಧತಿಯನ್ನು ಗೌರವಿಸುವುದು ನಮ್ಮ ಕರ್ತವ್ಯ.

ಗಮನಿಸಿ: ಹಬ್ಬಗಳ ಸಮಯದಲ್ಲಿ ಹಾವುಗಳಿಗೆ ಹಾಲು ನೀಡುವುದನ್ನು ತಪ್ಪಿಸಿ. ಅಲ್ಲದೆ, ಎಲ್ಲಾದರೂ ಜನ ವಸತಿ ಪ್ರದೇಶಗಳಲ್ಲಿ ಹಾವುಗಳು ಕಂಡರೆ, ಯಾವುದೇ ಹಾನಿ ಮಾಡದಂತೆ ಉರಗ ರಕ್ಷಕರ ಸಹಾಯದಿಂದ ನೈಸರ್ಗಿಕ ಪರಿಸರಕ್ಕೆ ಸ್ಥಳಾಂತರ ಮಾಡಿ. ಪ್ರಾಣಿಗಳ ಮೇಲೆ ದಯೆ ಇರಲಿ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net