ರೈಲು ಹಳಿಯ ಮೇಲೆ ಗಾಢ ನಿದ್ರೆಗೆ ಜಾರಿದ ವ್ಯಕ್ತಿ! ಟ್ರೈನ್​ ಆಗಮನ… ನಂತರ ನಡೆದಿದ್ದಿಷ್ಟು…

Railway Track
Published on

ಲಖನೌ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಮನೆಯ ಹಾಸಿಗೆ ಮೇಲೆ ಆರಾಮಾಗಿ ಮಲಗಿರುವ ರೀತಿಯಲ್ಲೇ ರೈಲು ಹಳಿಯ ಮೇಲೆ ಮಲಗಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?

ವೈರಲ್​ ವಿಡಿಯೋದಲ್ಲಿ ರೈಲು ಹಳಿಗಳ ಮೇಲೆ ವ್ಯಕ್ತಿಯೊಬ್ಬರು ಮಲಗಿರುವುದು ಕಂಡುಬಂದಿದೆ. ಬಿಸಿಲಿನಿಂದ ರಕ್ಷಣೆಗೆ ಕೆಳಗೆ ಟವೆಲ್ ಮತ್ತು ಮೇಲೆ ಕೊಡೆ ಹಾಕಿಕೊಂಡು ಹಾಯಾಗಿ ನಿದ್ರೆ ಮಾಡುತ್ತಿದ್ದಾರೆ. ಗಾಢ ನಿದ್ರೆಗೆ ಜಾರಿದ್ದ ವ್ಯಕ್ತಿಯನ್ನು ಸರಿಯಾದ ಸಮಯಕ್ಕೆ ನೋಡಿದ ಲೊಕೊ ಪೈಲಟ್, ತಕ್ಷಣ ರೈಲಿಗೆ ಬ್ರೇಕ್​ ಹಾಕಿ ನಿಲ್ಲಿಸಿದರು. ಬಳಿಕ ಕೆಳಗಿಳಿದು ಬಂದು ಆತನನ್ನು ಹಳಿಯಿಂದ ಎಬ್ಬಿಸಿ ಕಳುಹಿಸಿದ್ದಾರೆ. ಆ ಬಳಿಕ ರೈಲು ಮುಂದೆ ಸಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಈ ವೈರಲ್ ವಿಡಿಯೋ ಪ್ರಯಾಗರಾಜ್‌ನ ಮೌಯಿಮಾ ರೈಲ್ವೇ ಕ್ರಾಸಿಂಗ್ ಬಳಿ ನಡೆದಿದೆ. ಗುರುವಾರ ಮಧ್ಯಾಹ್ನ ರೈಲು ಪ್ರಯಾಗ್‌ರಾಜ್‌ನಿಂದ ಮೌಯಿಮಾ ಮೂಲಕ ಪ್ರತಾಪ್‌ಗಢಕ್ಕೆ ಹೋಗುತ್ತಿತ್ತು. ಅಷ್ಟರಲ್ಲಿ ರೈಲು ಕ್ರಾಸಿಂಗ್‌ನಿಂದ ಮೇಲ್ಸೇತುವೆ ಬಳಿ ಬರುತ್ತಿದ್ದಂತೆ ಲೊಕೊ ಪೈಲಟ್‌ಗೆ ವ್ಯಕ್ತಿಯೊಬ್ಬ ಹಳಿ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣವೇ ರೈಲನ್ನು ನಿಲ್ಲಿಸಿ ವ್ಯಕ್ತಿಯ ಪ್ರಾಣವನ್ನು ಲೊಕೊ ಪೈಲಟ್ ಕಾಪಾಡಿದ್ದಾರೆ.​

ಕೆಲಸ ಮಾಡಿ ಸುಸ್ತಾಗಿರುವ ವ್ಯಕ್ತಿ, ಟವೆಲ್, ಕೊಡೆ ಹಿಡಿದು ರೈಲು ಹಳಿಯ ಮೇಲೆ ಮಲಗಿದ್ದ ಎಂದು ತಿಳಿದುಬಂದಿದೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮೌಯಿಮಾ ರೈಲ್ವೆ ನಿಲ್ದಾಣದ ಅಧೀಕ್ಷಕರು, ಈ ವಿಷಯ ನನಗೆ ತಿಳಿದಿಲ್ಲ ಎಂದು ಹೇಳಿದರು. ಇದೇ ವೇಳೆ ರೈಲ್ವೆ ಹಳಿ ಮೇಲೆ ಮಲಗಿದ್ದ ವ್ಯಕ್ತಿ ಯಾರು ಎಂಬುದು ಸಹ ಇನ್ನೂ ತಿಳಿದು ಬಂದಿಲ್ಲ. ಇದರ ನಡುವೆ ನೆಟ್ಟಿಗರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಶೇರ್ ಮಾಡುತ್ತಿದ್ದಾರೆ. ಜೊತೆಗೆ ಕಾಮೆಂಟ್ಸ್ ಕೂಡ ಮಾಡಲಾಗುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net