

Rain | ಭೂಮಿಯ ಮೇಲೆ ಮಳೆ ಸುರಿದಾಗ ನೀವು ಮಣ್ಣು ಪರಿಮಳ ಬೀರುವುದನ್ನು ಅನುಭವಿಸಿರುತ್ತೀರಿ. ಮಳೆ ಹನಿಗಳು ನೆಲದ ಮೇಲೆ ಬಿದ್ದಾಗ, ಭೂಮಿ ಒದ್ದೆಯಾಗುತ್ತಿದ್ದಂತೆ ಇಡೀ ವಾತಾವರಣಕ್ಕೆ ಅದರ ಪರಿಮಳ ವ್ಯಾಪಿಸುತ್ತದೆ. ಈ ಸಂದರ್ಭದಲ್ಲಿ ಜನರು ಮಳೆ ಬರುತ್ತಿರುವ ಕಾರಣದಿಂದಾಗಿ ಮಣ್ಣು ವಾಸನೆ ಬೀರುತ್ತಿದೆ ಎಂದು ಅಂದುಕೊಳ್ಳುತ್ತಾರೆ. ಆದರೆ ಈ ವಾಸನೆ ಎಲ್ಲಿಂದ ಬರುತ್ತದೆ ಎಂಬುದನ್ನ ನೀವು ಎಂದಾದರೂ ಊಹಿಸಿದ್ದೀರ? ಮಣ್ಣು ಎಲ್ಲೆಡೆ ಒಂದೇ ರೀತಿಯ ಪರಿಮಳ ಬೀರುತ್ತದೆಯೇ ಅಥವಾ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ವಾಸನೆ ಬರುತ್ತದೆಯೇ ಎಂಬುದನ್ನು ತಿಳಿಯೋಣ.
ಮಳೆಯಲ್ಲಿ ನೆನೆದ ಮಣ್ಣಿನಿಂದ ಬರುವ ಪರಿಮಳವನ್ನು ಪೆಟ್ರಿಚೋರ್ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಪೆಟ್ರಾ ಎಂದರೆ ಕಲ್ಲು ಹಾಗೂ ಇಚೋರ್ ಎಂದರೆ ದೇವರುಗಳ ರಕ್ತ ಎಂಬ ಅರ್ಥವಿದೆ. ಹಾಗಾಗಿ ಇದು ಪ್ರಾಚೀನ ಮತ್ತು ನಿಗೂಢ ಪರಿಮಳವನ್ನು ಹೊಂದಿದೆ ಎಂದು ಸೂಚಿಸುತ್ತದೆ.
ಒಣ ಭೂಮಿಯ ಮೇಲೆ ಮೊದಲ ಮಳೆ ಹನಿಗಳು ಬಿದ್ದಾಗ, ಮಣ್ಣಿನಲ್ಲಿ ಅಡಗಿರುವ ವಿಶೇಷ ಬ್ಯಾಕ್ಟೀರಿಯಾದ ಪದರಗಳು ಸಕ್ರಿಯಗೊಳ್ಳುತ್ತವೆ. ಈ ಬ್ಯಾಕ್ಟೀರಿಯಾಗಳ ಹೆಸರನ್ನು ಆಕ್ಟಿನೊಮೈಸೆಟ್ಸ್ ಎಂದು ಕರೆಯಲಾಗುತ್ತದೆ. ಈ ಬ್ಯಾಕ್ಟೀರಿಯಾಗಳು ವಿಶೇಷ ರೀತಿಯ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ. ಇದನ್ನು ಜಿಯೋಸ್ಮಿನ್ ಎಂದು ಕರೆಯಲಾಗುತ್ತದೆ. ಈ ಜಿಯೋಸ್ಮಿನ್ ನಮ್ಮ ಮೂಗಿಗೆ ಮಣ್ಣಿನ ಪರಿಮಳವನ್ನು ತಲುಪಿಸುತ್ತದೆ. ಈ ಪರಿಮಳದಿಂದ ನಮಗೆ ಶಾಂತಿಯನ್ನು ನೀಡುವಂತೆ ಬಾಸವಾಗುತ್ತದೆ.
ಹಾಗಾದರೆ ಈ ಪರಿಮಳ ಎಲ್ಲೆಡೆ ಒಂದೇ ರೀತಿ ಇದೆಯೇ ಎಂದು ನೋಡುವುದಾರೆ, ಮೊದಲ ಮಳೆಯ ಪರಿಮಳದ ಮೂಲ ಒಂದೇ ಆಗಿರುತ್ತದೆ, ಆದರೆ ಅದರ ಪರಿಮಳವು ಬೇರೆ ಬೇರೆ ಸ್ಥಳಗಳಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿಯೊಂದು ಸ್ಥಳವು ವಿಭಿನ್ನ ರೀತಿಯ ಮಣ್ಣನ್ನು ಹೊಂದಿರುವಂತೆ. ಒಂದು ಕಡೆ ಕಪ್ಪು ಮಣ್ಣು ಇದೆ, ಆದರೆ ಮತ್ತೊಂದು ಕಡೆ ಕೆಂಪು, ಮರಳು ಅಥವಾ ಲವಣಯುಕ್ತ ಮಣ್ಣು ಇದೆ. ಈ ಎಲ್ಲಾ ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾ, ಖನಿಜಗಳು ಮತ್ತು ಸೂಕ್ಷ್ಮಜೀವಿಗಳು ವಿಭಿನ್ನವಾಗಿವೆ. ಹಾಗಾಗಿ ವಾಸನೆಯೂ ಸ್ವಲ್ಪ ಬದಲಾಗುತ್ತದೆ.
(ಏಜೆನ್ಸೀಸ್)
ಹೆಚ್ಚು ಹಸಿರು ಇರುವಲ್ಲಿ, ಮರಗಳು ಮತ್ತು ಎಲೆಗಳಿಗೆ ಧೂಳು ಅಂಟಿಕೊಂಡಿರುತ್ತದೆ. ಮಳೆ ಬಂದಾಗ ಧೂಳು ಹೊರಹೋಗಿ, ಮರಗಳ ಪರಿಮಳ ಗಾಳಿಯೊಂದಿಗೆ ಬೆರೆಯುತ್ತದೆ. ಇದು ಪರಿಮಳವನ್ನು ಸ್ವಲ್ಪ ವಿಭಿನ್ನ ಮತ್ತು ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ. ಕಾರುಗಳ ಹೊಗೆ ಮತ್ತು ಕಾರ್ಖಾನೆಗಳ ಮಾಲಿನ್ಯ ಹೆಚ್ಚಿರುವ ನಗರಗಳಲ್ಲಿ, ಮಳೆಯ ವಾಸನೆ ಸ್ವಲ್ಪ ಭಿನ್ನವಾಗಿರುತ್ತದೆ. ಕೆಲವು ಸ್ಥಳಗಳಲ್ಲಿ, ಆರ್ದ್ರತೆ ಮತ್ತು ತಾಪಮಾನದಂತಹ ಋತುಗಳು ಸಹ ವಾಸನೆಯಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತವೆ. ಶಾಖ ಹೆಚ್ಚಿರುವಲ್ಲಿ ಮಣ್ಣು ತುಂಬಾ ಒಣಗಿರುತ್ತದೆ. ಅಲ್ಲಿ ಮಳೆಯ ಪರಿಮಳ ತುಂಬಾ ಹೆಚ್ಚಾಗಿರುತ್ತದೆ. ಅಂದಹಾಗೆ ಶೀತ ಇರುವ ಸ್ಥಳಗಳಲ್ಲಿ, ಈ ಸುಗಂಧವು ಸ್ವಲ್ಪ ಮಟ್ಟಿಗೆ ಕಡಿಮೆ ಇರುತ್ತದೆ.