

Donald Trump: ವಿಶ್ವದ ಬಹು ರಾಷ್ಟ್ರಗಳ ಮೇಲೆ ಪಾರಸ್ಪರಿಕ ಸುಂಕದ ಹೊರೆ ಹೊರಿಸಿದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಜಾಗತಿಕ ಮಾರುಕಟ್ಟೆಯಲ್ಲಿನ ಅಲ್ಲೋಲ-ಕಲ್ಲೋಲಕ್ಕೆ ಕಾರಣರಾದರು. ಈ ಬೆಳವಣಿಗಗಳ ಬೆನ್ನಲ್ಲೇ ಚೀನಾ ದೇಶವನ್ನು ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದ್ದಾರೆ. ಇದು ವಿಶ್ವದ ದೊಡ್ಡಣ್ಣನ ನಿಲುವನ್ನು ಪ್ರಶ್ನಿಸಿದೆ ಮತ್ತು ಯುಎಸ್-ಚೀನಾ ವ್ಯಾಪಾರ ಯುದ್ಧಕ್ಕೆ ಕಾರಣವಾಗಿದೆ.
ಮತ್ತೊಮ್ಮೆ ಚೀನಾ ಉತ್ಪನ್ನಗಳ ಮೇಲಿನ ಸುಂಕಗಳ ಮೇಲೆ ಟ್ರಂಪ್ ಯು-ಟರ್ನ್ ಹೊಡೆದಿದ್ದಾರೆ. ಸ್ಮಾರ್ಟ್ಫೋನ್, ಲ್ಯಾಪ್ಟಾಪ್ ಮತ್ತು ಸೆಮಿಕಂಡಕ್ಟರ್ ಚಿಪ್ಗಳು ಸೇರಿದಂತೆ ಹಲವಾರು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಪ್ರತೀಕಾರದ ಸುಂಕಗಳಿಂದ ವಿನಾಯಿತಿ ನೀಡುವುದಾಗಿ ಘೋಷಿಸಿದ್ದಾರೆ. ಈ ವಿನಾಯಿತಿ ಚೀನಾಗೂ ಅನ್ವಯಿಸುತ್ತದೆ ಎಂಬುದನ್ನು ಒತ್ತಿ ಹೇಳಿದ್ದಾರೆ. ಸೂಚಿಸಲಾದ ಉತ್ಪನ್ನಗಳಲ್ಲಿ ಹೆಚ್ಚಿನವು ಚೀನಾದಿಂದ ಆಮದು ಮಾಡಿಕೊಳ್ಳಲ್ಪಡುತ್ತವೆ. ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣೆಯ ಸೂಚನೆಯ ಪ್ರಕಾರ, ಚೀನಾ ಮೇಲೆ ವಿಧಿಸಲಾದ ಪ್ರಸ್ತುತ 145 ಪ್ರತಿಶತ ಸುಂಕ ಅಥವಾ ಇತರ ದೇಶಗಳ ಮೇಲೆ ವಿಧಿಸಲಾದ 10 ಪ್ರತಿಶತ ಮೂಲ ಸುಂಕದ ಅಡಿಯಲ್ಲಿ ಹೊಸ ಸುಂಕಗಳು ಈ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ ಎನ್ನಲಾಗಿದೆ.
ಏಪ್ರಿಲ್ 9ರಂದು ಸುಂಕಗಳನ್ನು ವಿಧಿಸಿದ 13 ಗಂಟೆಗಳ ಬಳಿಕ ಚೀನಾ ಹೊರತುಪಡಿಸಿ ಹೆಚ್ಚಿನ ದೇಶಗಳಿಗೆ 90 ದಿನಗಳವರೆಗೆ ಸುಂಕ ಹೊರೆಯಿಂದ ಬಿಗ್ ರಿಲೀಫ್ ನೀಡಲಾಗಿದೆ.
ನೋಟಿಸ್ಗಳ ಪ್ರಕಾರ, ವಿನಾಯಿತಿ ಏಪ್ರಿಲ್ 5ರ ಮೊದಲು ಅಮೆರಿಕಾಗೆ ಬಂದ ಅಥವಾ ವೇರ್ಹೌಸ್ನಿಂದ ತೆಗೆದುಹಾಕಲಾದ ಉತ್ಪನ್ನಗಳಿಗೆ ಅನ್ವಯಿಸುತ್ತದೆ. ಇದು ಆ್ಯಪಲ್ ಮತ್ತು ಸ್ಯಾಮ್ಸಂಗ್ನಂತಹ ಕಂಪನಿಗಳಿಗೆ ಮತ್ತು ಎನ್ವಿಡಿಯಾದಂತಹ ಚಿಪ್ ತಯಾರಕರಿಗೆ ದೊಡ್ಡ ಪ್ರಯೋಜನವಾಗಿದೆ. ಈ ಉತ್ಪನ್ನಗಳ ಮೇಲಿನ ಸುಂಕವನ್ನು ಹೆಚ್ಚಿಸುವುದರಿಂದ ಗ್ಯಾಜೆಟ್ಗಳ ಬೆಲೆಗಳು ಗಗನಕ್ಕೇರುತ್ತವೆ ಎಂಬ ಕಳವಳ ವ್ಯಕ್ತವಾಗಿದೆ. ಆದಾಗ್ಯೂ, ಟ್ರಂಪ್ ಆಡಳಿತ ತೆಗೆದುಕೊಂಡ ಈ ನಿರ್ಧಾರಕ್ಕೆ ಸೂಚನೆಯಲ್ಲಿ ಯಾವುದೇ ವಿವರಣೆಯನ್ನು ನೀಡಲಾಗಿಲ್ಲ.
ಸುಮಾರು 80 ಪ್ರತಿಶತ ಆ್ಯಪಲ್ ಐಫೋನ್ಗಳನ್ನು ಚೀನಾದಲ್ಲಿ ಜೋಡಿಸಲಾಗುತ್ತದೆ. ಉಳಿದ 20 ಪ್ರತಿಶತವನ್ನು ಭಾರತೀಯ ಮಾರುಕಟ್ಟೆಗಾಗಿ ತಯಾರಿಸಲಾಗುತ್ತದೆ ಎಂದು ಯುಎಸ್ ಏಜೆನ್ಸಿ ಅಂದಾಜಿಸಿದೆ. ಸ್ಮಾರ್ಟ್ಫೋನ್ಗಳು ಮತ್ತು ಕಂಪ್ಯೂಟರ್ಗಳ ಜೊತೆಗೆ, ಇತರ ಡಿಸ್ಕ್ ಡ್ರೈವ್ಗಳು, ಡೇಟಾ ಸಂಸ್ಕರಣಾ ಸಾಧನ, ಸೆಮಿಕಂಡಕ್ಟರ್ ಸಾಧನ, ಮೆಮೊರಿ ಚಿಪ್, ಫ್ಲಾಟ್-ಪ್ಯಾನಲ್ ಡಿಸ್ಪ್ಲೇಗಳು, ದೂರಸಂಪರ್ಕ ಸಾಧನ, ಚಿಪ್ಮೇಕಿಂಗ್ ಯಂತ್ರಗಳು, ರೆಕಾರ್ಡಿಂಗ್ ಸಾಧನಗಳು ಮತ್ತು ಮುದ್ರಿತ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿಗಳಂತಹ ಉತ್ಪನ್ನಗಳನ್ನು ಸಹ ವಿನಾಯಿತಿ ನೀಡಬಹುದು.
ಈ ಉತ್ಪನ್ನಗಳಲ್ಲಿ ಹಲವು ಯುನೈಟೆಡ್ ಸ್ಟೇಟ್ಸ್ನಲ್ಲಿ ತಯಾರಾಗುತ್ತವೆ. ಈ ಉತ್ಪನ್ನಗಳಿಗೆ ದೇಶೀಯ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಅಮೆರಿಕಾಗೆ ವರ್ಷಗಳೇ ಬೇಕಾಗುತ್ತದೆ ಎಂದು ತಜ್ಞರು ವಿವರಿಸಿದ್ದಾರೆ,(ಏಜೆನ್ಸೀಸ್).