

Creature : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ.
ಮನುಷ್ಯನಿಂದ ಹಿಡಿದು ಎಲ್ಲ ಪ್ರಾಣಿಗಳಲ್ಲೂ ಒಂದೊಂದು ವಿಶೇಷತೆ ಮತ್ತು ವಿಚಿತ್ರ ಗುಣಗಳಿರುತ್ತವೆ. ಅವುಗಳ ಬಗ್ಗೆ ತಿಳಿದಾಗ ನಮ್ಮ ಹುಬ್ಬೇರುತ್ತದೆ. ಕೆಲವೊಂದು ಜೀವಿಗಳ ವರ್ತನೆಗಳು ಎಷ್ಟೊಂದು ವಿಚಿತ್ರವಾಗಿವೆ ಅಂದರೆ ನಿಜಕ್ಕೂ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಇದೀಗ ಅಂಥದ್ದೇ ವಿಚಿತ್ರ ಜೀವಿಯೊಂದರ ಬಗ್ಗೆ ನಾವಿಂದು ತಿಳಿಸಿಕೊಡುತ್ತೇವೆ.
ನಮ್ಮ ಸುತ್ತಲಿನ ಅನೇಕ ವಿಚಿತ್ರ ಜೀವಿಗಳ ಬಗ್ಗೆ ನಮಗೆ ಬಹುಶಃ ಹೆಚ್ಚು ತಿಳಿದಿಲ್ಲ. ಹೀಗಾಗಿಯೇ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಸಂದರ್ಶನಗಳಲ್ಲಿ ಸಾಮಾನ್ಯ ಜ್ಞಾನದಲ್ಲಿ ಇಂತಹ ಪ್ರಶ್ನೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅದೇ ರೀತಿ ಸರ್ಕಾರಿ ಉದ್ಯೋಗದ ಸಂದರ್ಶನವೊಂದರಲ್ಲಿ, ಲೈಂಗಿಕ ಕ್ರಿಯೆಯ ನಂತರ ಯಾವ ಜೀವಿ ತನ್ನ ಮರ್ಮಾಂಗವನ್ನು ಕತ್ತರಿಸಿಕೊಳ್ಳುತ್ತದೆ? ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ನಮ್ಮಲ್ಲಿ ಹೆಚ್ಚಿನವರಿಗೆ ಉತ್ತರ ತಿಳಿದಿರುವುದಿಲ್ಲ. ಆದರೆ, ಅಚ್ಚರಿಯ ಉತ್ತರ ಇಲ್ಲಿದೆ.
ಸೀ ಸ್ಲಗ್‌ಗಳು ಒಂದು ರೀತಿಯ ಸಮುದ್ರ ಜೀವಿ. ಇದು ಕ್ರೋಮೋಡೋರಿಸ್ ರೆಟಿಕ್ಯುಲೇಟ್ ಪ್ರಬೇಧಕ್ಕೆ ಸೇರಿದ್ದು, ಪೆಸಿಫಿಕ್ ಸಮುದ್ರದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವುಗಳು ಸಂಕೀರ್ಣವಾದ ಲೈಂಗಿಕ ಜೀವನವನ್ನು ಹೊಂದಿದೆ. ಬಿಸಾಡಬಹುದಾದ ಮರ್ಮಾಂಗದೊಂದಿಗೆ ಪದೇ ಪದೆ ಸಂಭೋಗಿಸಬಲ್ಲ ಮೊದಲ ಜೀವಿ ಇದಾಗಿದೆ ಎಂದು ಜಪಾನ್ ಸಂಶೋಧಕರು ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದ ಅಧ್ಯಯನ ವರದಿಯನ್ನು ರಾಯಲ್ ಸೊಸೈಟಿಯ ಜರ್ನಲ್ ಬಯಾಲಜಿ ಲೆಟರ್ಸ್‌ನಲ್ಲಿ ಪ್ರಕಟಿಸಲಾಗಿದೆ. ಈ ಸೀ ಸ್ಲಗ್‌ಗಳು ಗಂಡು ಮತ್ತು ಹೆಣ್ಣಿನ ಲೈಂಗಿಕ ಅಂಗಗಳನ್ನು ಹೊಂದಿದ್ದು, ಎರಡನ್ನೂ ಒಂದೇ ಸಮಯದಲ್ಲಿ ಬಳಸಬಹುದಾಗಿದೆ.
ಈ ಬಗ್ಗೆ ಉತ್ತರ ಐರ್ಲೆಂಡ್‌ನ ರಾಷ್ಟ್ರೀಯ ವಸ್ತುಸಂಗ್ರಹಾಲಯಗಳಲ್ಲಿ ಸಮುದ್ರ ಅಕಶೇರುಕಗಳ ಮೇಲ್ವಿಚಾರಕರಾದ ಬರ್ನಾರ್ಡ್ ಪಿಕ್ಟನ್ ಮಾತನಾಡಿದ್ದು, ಸೀ ಸ್ಲಗ್ಗಳಲ್ಲಿ ಜನನಾಂಗಗಳು ದೇಹದ ಬಲಭಾಗದಲ್ಲಿರುತ್ತವೆ ಮತ್ತು ಎರಡೂ ಒಟ್ಟಿಗೆ ಇದ್ದು, ಒಂದಕ್ಕೊಂದು ಎದುರುಬದುರಾಗಿ ಇರುತ್ತವೆ. ಅಂದರೆ, ಶಿಶ್ನವು ಇನ್ನೊಂದರ ಹೆಣ್ಣಿನ ಅಂಗಕ್ಕೆ ಹೊಂದಿಕೊಂಡಿರುತ್ತದೆ. ಎರಡೂ ಕೂಡ ಪರಸ್ಪರ ವೀರ್ಯವನ್ನು ಬಿಡುಗಡೆ ಮಾಡುತ್ತವೆ. ನಾನು ಈ ಮೊದಲು ಇಂತಹದ್ದನ್ನು ನೋಡೇ ಇಲ್ಲ ಎಂದು ಬರ್ಡಾಡ್ ಹೇಳಿದ್ದಾರೆ.
ಜಪಾನ್‌ನ ಸುತ್ತಮುತ್ತಲಿನ ಆಳವಿಲ್ಲದ ಹವಳದ ದಿಬ್ಬಗಳಿಂದ ಸಂಗ್ರಹಿಸಿದ ಸೀ ಸ್ಲಗ್ಗಳನ್ನು ಜಪಾನಿನ ಸಂಶೋಧನಾ ತಂಡ ಪರಿಶೀಲಿಸಿದ್ದು, ಅವುಗಳು 31 ಬಾರಿ ಸಂಭೋಗಿಸುವುದನ್ನು ನೋಡಿದ್ದಾರೆ. ಈ ಕ್ರಿಯೆಯು ಕೆಲವು ಸೆಕೆಂಡುಗಳಿಂದ ಕೆಲವು ನಿಮಿಷಗಳವರೆಗೆ ನಡೆಯಿತು. ನಂತರ ಆ ಜೀವಿಗಳು ತಮ್ಮ ಶಿಶ್ನಗಳನ್ನು ಉದುರಿಸುವುದು ಕಂಡುಬಂದಿದೆ. ಆದರೆ, ಕೇವಲ 24 ಗಂಟೆಗಳ ಬಳಿಕ ಸೀ ಸ್ಲಗ್‌ಗಳು ತಮ್ಮ ಪುರುಷ ಅಂಗಗಳನ್ನು ಪುನರುತ್ಪಾದಿಸಿ ಮತ್ತೆ ಸಂಭೋಗ ನಡೆಸಿದ್ದನ್ನು ನೋಡಿ ಸ್ವತಃ ಸಂಶೋಧಕರು ಆಶ್ಚರ್ಯಚಕಿತರಾದರು.
ಸೀ ಸ್ಲಗ್‌ಗಳು ಮಾತ್ರ ಶಿಶ್ನವನ್ನು ತ್ಯಜಿಸುವ ಏಕೈಕ ಪ್ರಾಣಿಗಳಲ್ಲ. ಆರ್ಬ್ ವೇವಿಂಗ್ ಸ್ಪೈಡರ್ ಕೂಡ ಲೈಂಗಿಕತೆಯ ನಂತರ ತಮ್ಮ ಪುರುಷ ಅಂಗಗಳನ್ನು ಕಳೆದುಕೊಳ್ಳುತ್ತವೆ. ಅದೇ ರೀತಿ ಪೆರಿವಿಂಕಲ್ ಎಂದು ಕರೆಯಲ್ಪಡುವ ಸಮುದ್ರ ಜೀವಿ ಮತ್ತು ಅರಿಯೊಲಿಮ್ಯಾಕ್ಸ್ ಕುಲಕ್ಕೆ ಸೇರಿದ ಲ್ಯಾಂಡ್ ಸ್ಲಗ್‌ಗಳು ಸಹ ತಮ್ಮ ಮರ್ಮಾಂಗವನ್ನು ಕಳೆದುಕೊಳ್ಳುತ್ತವೆ. ಆದರೆ, ಕ್ರೋಮೋಡೋರಿಸ್ ರೆಟಿಕ್ಯುಲಾಟಾ ತನ್ನ ಮರ್ಮಾಂಗವನ್ನು ಮತ್ತೆ ಪಡೆಯಬಲ್ಲ ಮೊದಲ ಜೀವಿ ಎಂದು ಸಂಶೋಧಕರು ನಂಬಿದ್ದಾರೆ. (ಏಜೆನ್ಸೀಸ್)