

ಚಿಕ್ಕಬಳ್ಳಾಪುರ: ಪುರಾತತ್ವ ಇಲಾಖೆಯಿಂದ ಗ್ರಾಮವಾರು ಸರ್ವೇಗಾಗಿ ಆಗಮಿಸಿದ್ದ ಶಾಸನತಜ್ಞ ಕೆ.ಧನಪಾಲ್ ಮತ್ತು ತಂಡವು, ೧,೨೦೦ ವರ್ಷಗಳಷ್ಟು ಹಿಂದಿನ ಗಂಗರ ಕಾಲದ ಅಪ್ರಕಟಿತ ಶಾಸನ ಸಹಿತ ವೀರಗಲ್ಲುಗಳನ್ನು ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಮತ್ತು ಗೆಜ್ಜಿಗಾನಹಳ್ಳಿಗಳಲ್ಲಿ ಪತ್ತೆ ಹಚ್ಚಿದೆ.
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ರೈತ ಕೆ.ಎಂ.ಮೂರ್ತಿಯವರ ಮಾವಿನ ತೋಪಿನ ಬಳಿ ಶಾಸನ ಮತ್ತು ವೀರಗಲ್ಲುಗಳನ್ನು ಶೋಧಿಸಲಾಗಿದೆ. ಶಾಸನದ ಲಿಪಿ ಹಳಗನ್ನಡದ್ದಾಗಿದೆ. ಅದರ ಲಿಪಿಯ ಶೈಲಿಯಿಂದ ಇದು ಗಂಗರ ಕಾಲದ್ದೆಂದು ಹೇಳಬಹುದಾಗಿದೆ. ಈ ಹಳಗನ್ನಡ ಶಾಸನದಲ್ಲಿ “ಸ್ವಸ್ತಿಶ್ರೀ ಕೊತ್ತನ್ನರ್” ಎಂದು ಪ್ರಾರಂಭವಾಗುವ ವಾಕ್ಯದಲ್ಲಿ ಗ್ರಾಮದ ಹೆಸರು ಕೊತ್ತನೂರು ಎಂಬ ಪದವು, ಈ ಗ್ರಾಮದ ಇತಿಹಾಸವನ್ನು ೧,೨೦೦ ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ ಎಂದು ಶಾಸನತಜ್ಞ ಕೆ.ಧನಪಾಲ್ ತಿಳಿಸಿದ್ದಾರೆ.
ಕೊತ್ತನೂರಿನಲ್ಲಿ ಸಿಕ್ಕ ವೀರಗಲ್ಲಿನಲ್ಲಿ ವೀರನು ವೀರಾಸನದಲ್ಲಿ ನಿಂತಿದ್ದು, ಒಂದು ಕೈಯಲ್ಲಿ ಬಾಕುವನ್ನು ಹಿಡಿದಿದ್ದು, ಮತ್ತೊಂದು ಕೈಯಲ್ಲಿ ಬಿಲ್ಲನ್ನು ಹಿಡಿದಿರುವನು. ಆತನ ಹೊಟ್ಟೆ ಮತ್ತು ಭುಜಕ್ಕೆ ಎರಡು ಬಾಣಗಳು ನೆಟ್ಟಿರುವುದನ್ನು ಚಿತ್ರಿಸಲಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಗೆಜ್ಜಿಗಾನಹಳ್ಳಿಯಲ್ಲಿ ಆರು ಶಾಸನ ಮತ್ತು ವೀರಗಲ್ಲುಗಳು ಪತ್ತೆಯಾಗಿವೆ. ಅದರಲ್ಲಿನ ಒಂದು ಶಾಸನಸಹಿತ ವೀರಗಲ್ಲಿನಲ್ಲಿ ತನ್ನ ಗ್ರಾಮಕ್ಕೆ ವೈರಿಗಳು ನುಗ್ಗಿ ಗೋವುಗಳನ್ನು ಅಪಹರಿಸಲು ಪ್ರಯತ್ನಿಸಿದಾಗ ವೀರನ್ನು ಹೋರಾಡಿ ಮಡಿದಿದ್ದಾನೆ ಎಂಬ ಸಂಗತಿಯನ್ನು ಹಳಗನ್ನಡದ ಲಿಪಿಯಲ್ಲಿ ಬರೆಯಲಾಗಿದೆ. ವೀರನ ಕುರಿತಾದ ಈ ವೀರಗಲ್ಲನ್ನು ಈ ಪ್ರಾಂತ್ಯದ ಮುಖಂಡ ಹಾಕಿಸಿರುವುದಾಗಿ ಬರೆದಿರುವರು. ವೀರನು ಹೋರಾಡುವಾಗ ವೈರಿಗಳ ರುಂಡವನ್ನು ಕತ್ತರಿಸುವುದನ್ನು ಶಿಲ್ಪಿ ಸುಂದರವಾಗಿ ಕೆತ್ತಲಾಗಿದೆ.
*ಅಪ್ರಕಟಿತ ಶಾಸನಗಳು
ಇಪ್ಪತ್ತನೇ ಶತಮಾನದ ಆದಿಯಲ್ಲಿ ಮೈಸೂರು ಅರಸರ ಒತ್ತಾಸೆಯ ಮೇರೆಗೆ ಬಿ.ಎಲ್.ರೈಸ್ ಎಂಬ ಬ್ರಿಟಿಷ್ ವಿದ್ವಾಂಸರ ನೇತೃತ್ವದಲ್ಲಿ ಹಳೇ ಮೈಸೂರಿನಾದ್ಯಂತ ಶಾಸನಗಳ ಸರ್ವೆ ನಡೆಸಿ, ಓದಿ, ಎಪಿಗ್ರಾಪಿಯಾ ಕರ್ನಾಟಿಕ ಸಂಪುಟಗಳಲ್ಲಿ ದಾಖಲಿಸಿದ್ದಾರೆ. ಇದರಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಶಾಸನ ಸಂಪುಟವನ್ನು ೧೯೦೫ ರಲ್ಲಿ ಪ್ರಕಟಿಸಲಾಯಿತು. ಇವನ್ನು “ಪ್ರಕಟಿತ ಶಾಸನಗಳು” ಎನ್ನುತ್ತೇವೆ. ಈಗಿನ ಇತಿಹಾಸ ತಜ್ಞರು ರೈಸ್ ಅವರಿಗೆ ಸಿಗದ್ದನ್ನು ಹುಡುಕಿ ಶಾಸನಗಳನ್ನು ಓದಿ, ದಾಖಲು ಮಾಡುವ ಶಾಸನಗಳನ್ನು “ಅಪ್ರಕಟಿತ ಶಾಸನಗಳು” ಎನ್ನುತ್ತಾರೆ ಶಾಸನತಜ್ಞ ಕೆ.ಆರ್.ನರಸಿಂಹನ್.