

Instagram: ಸಾಮಾಜಿಕ ಜಾಲತಾಣಗಳು ಹಿಂದಿನ ಯುಗದಲ್ಲಿ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿವೆ. ಜನರ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿವೆ. ಪ್ರತಿಯೊಬ್ಬರು ಇಂದು ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮಗಳನ್ನು ನೋಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಬಹುದು. ಇಲ್ಲಿ ಪ್ರತಿಯೊಬ್ಬರೂ ರೀಲ್ಸ್ ಮತ್ತು ಪೋಸ್ಟ್‌ಗಳ ಮೂಲಕ ತಮ್ಮ ನಟನೆ, ವ್ಯಕ್ತಿತ್ವವನ್ನು ಪರಿಚಯಿಸಿಕೊಳ್ಳುತ್ತಾರೆ. ಆದರೆ ಕೆಲವರು ದಿಢೀರ್ ಜನಪ್ರಿಯತೆಯನ್ನು ಪಡೆಯಲು ತಮ್ಮ ಎಲ್ಲಾ ಮಿತಿಗಳನ್ನು ಮೀರುತ್ತಾರೆ. ಅನೇಕ ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ವೀಡಿಯೊ, ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.
ಇತ್ತೀಚೆಗೆ ಇನ್‌ಸ್ಟಾಗ್ರಾಮ್ ನೋಡಿದ್ರೆ ಅಂತಹ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇಂಟರ್ನೆಟ್, ಜಾಲತಾಣಗಳಲ್ಲಿ ಈ ರೀತಿಯ ಪೋಸ್ಟ್ ಹಾಕುವವರ ವಿರುದ್ಧ ನಮ್ಮ ದೇಶದಲ್ಲಿ ಕಠಿಣ ಕಾನೂನುಗಳಿವೆ.
ಅಶ್ಲೀಲ ಕಂಟೆಂಟ್ ಪೋಸ್ಟ್ ಮಾಡಿದ್ರೆ ಶಿಕ್ಷೆ ಏನು?
2000ರ ಐಟಿ ಕಾಯ್ದೆಯ ಸೆಕ್ಷನ್ 67 ಪ್ರಕಾರ, ಯಾರಾದ್ರೂ, ಯಾವುದೇ ರೀತಿಯ ಅಶ್ಲೀಲ ಕಂಟೆಂಟ್ ಅನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದ್ರೆ ಅದನ್ನು ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಮೊದಲ ಬಾರಿ ಸಿಕ್ಕಿ ಬಿದ್ರೆ 3 ವರ್ಷ ಜೈಲು ಶಿಕ್ಷೆ ಭಾರಿ ದಂಡ ವಿಧಿಸಬಹುದು. ಅದೇ ಪುನರಾವರ್ತನೆ ಆದರೆ, 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಹೆಚ್ಚಿಸಬಹುದು.
ಅಷ್ಟೇ ಅಲ್ಲದೆ, 2023ರ ಬಿಎನ್‌ಎಸ್‌ನ ಸೆಕ್ಷನ್ 354 ಮತ್ತು 356ರ ಪ್ರಕಾರ ಗಂಭೀರ ಅಪರಾಧವಾಗುತ್ತದೆ. ಯಾರಾದರೂ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅಶ್ಲೀಲ ಕಂಟೆಂಟ್ ಶೇರ್ ಮಾಡಿದ್ರೆ, ಅಥವಾ ತೋರಿಸಿದ್ರೆ ಸೆಕ್ಷನ್ 354ರ ಎರಡು ವರ್ಷಗಳವರೆಗೆ ಶಿಕ್ಷೆ ಅಥವಾ ದಂಡ, ಇಲ್ಲ ಎರಡನ್ನೂ ವಿಧಿಸಬಹುದು.
ಸೆಕ್ಷನ್ 356ರ ಪ್ರಕಾರ, ಒಬ್ಬ ವ್ಯಕ್ತಿ ಸಾರ್ವಜನಿಕವಾಗಿ ಇಲ್ಲ, ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಅಶ್ಲೀಲವಾಗಿ ನಡೆದುಕೊಂಡರೆ, ಇನ್ನೊಬ್ಬರ ಘನತೆಗೆ ಧಕ್ಕೆ ತರುವ ವಿಷಯ ಪೋಸ್ಟ್ ಮಾಡಿದ್ರೆ ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳು ಈಗ ಸಾರ್ವಜನಿಕ ವೇದಿಕೆಗಳಾಗಿವೆ. ಆದ್ದರಿಂದ ಈ ಸೆಕ್ಷನ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಆಕ್ಷೇಪಾರ್ಹ ವಿಷಯಗಳಿಗೂ ಅನ್ವಯಿಸಬಹುದು.
ಇನ್‌ಸ್ಟಾಗ್ರಾಮ್, ತಮ್ಮ ಕಂಪನಿಯ ನೀತಿಗಳ ಅನ್ವಯ ಅಶ್ಲೀಲತೆಯನ್ನು ಶೇರ್ ಮಾಡುವ ಖಾತೆಗಳನ್ನು ನಿರ್ಬಂಧಿಸುತ್ತೆ, ಅಳಿಸಿ ಹಾಕುತ್ತದೆ. ಕೆಲವೊಮ್ಮೆ ಬಳಕೆದಾರರನ್ನು ನಿಷೇಧಿಸಲಾಗುತ್ತದೆ. ಅವರ ವಿವರಗಳನ್ನು ಪೊಲೀಸರಿಗೆ ನೀಡಲಾಗುತ್ತದೆ. ಯಾರಾದರೂ ಅಶ್ಲೀಲತೆ ಪೋಸ್ಟ್ ಮಾಡಿ ಖಾತೆಯನ್ನು ಡಿಲಿಟ್ ಮಾಡಿದ್ರು ಕ್ರಮ ತೆಗೆದುಕೊಳ್ಳಬಹುದು. (ಏಜೆನ್ಸೀಸ್)