

Ex lover In Dream : ನಾವು ನಿದ್ರಿಸುವಾಗ, ನಮ್ಮ ದೇಹ ವಿಶ್ರಾಂತಿಯಲ್ಲಿರುತ್ತದೆ. ಆದರೆ, ಒಳಗಿನ ಎಲ್ಲ ಅಂಗಗಳು ತಮ್ಮ ಕೆಲಸವನ್ನು ಮಾಡುತ್ತಿರುತ್ತವೆ. ಅದರಲ್ಲೂ ವಿಶೇಷವಾಗಿ ಮೆದುಳು ತುಂಬಾ ಸಕ್ರಿಯವಾಗಿರುತ್ತದೆ. ಈ ವೇಳೆ ಭೂತ ಮತ್ತು ಭವಿಷ್ಯವನ್ನು ಮುನ್ಸೂಚಿಸುತ್ತದೆ. ಕೆಲವೊಮ್ಮೆ ನಮಗೆ ಬೀಳುವ ಕನಸಿನಲ್ಲಿ ಒಳ್ಳೆಯದು ಸಂಭವಿಸಿದರೆ, ಕೆಲವೊಮ್ಮೆ ಕೆಟ್ಟದ್ದು ಸಂಭವಿಸುತ್ತದೆ. ಅಲ್ಲದೆ, ಕೆಲವು ವಸ್ತುಗಳು ಮತ್ತು ಕೆಲವು ಜನರು ಕೂಡ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಕನಸಿನಲ್ಲಿ ಕಾಣುವ ಪ್ರತಿಯೊಂದಕ್ಕೂ ಒಂದು ಅರ್ಥ ಇರುತ್ತದೆ. ಅದೇ ರೀತಿ ಮಾಜಿ ಪ್ರೇಮಿ ಅಥವಾ ಪ್ರೇಮಿ ಕನಸಿನಲ್ಲಿ ಕಂಡರೆ ಅದರ ಅರ್ಥ ಏನೆಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕನಸು ಒಂದು ಮಾನಸಿಕ ಆಲೋಚನೆ ಅಥವಾ ಘಟನೆ. ನಾವು ನಿದ್ದೆ ಮಾಡುವಾಗ ಕನಸು ಕಾಣುವುದು ಸಹಜ. ಬಹುತೇಕ ಎಲ್ಲರೂ ನಿದ್ರೆಯ ಸಮಯದಲ್ಲಿ ಕನಸು ಕಾಣುತ್ತೇವೆ. ನಮ್ಮ ಮೆದುಳು ಹೈಪರ್ ಆ್ಯಕ್ಟಿವ್ ಆಗಿರುವುದರಿಂದ ನಿದ್ರೆಯ ಸಮಯದಲ್ಲಿ ಕನಸು ಬರುತ್ತದೆ. ನಮಗೆ ಪ್ರತಿದಿನ ವಿವಿಧ ರೀತಿಯ ಕನಸುಗಳು ಬೀಳುತ್ತವೆ. ಅನೇಕ ಜನರು ತಮ್ಮ ಮಾಜಿ ಪ್ರೇಮಿಗಳ ಬಗ್ಗೆ ಕನಸುಗಳನ್ನು ಕಾಣುತ್ತಾರೆ. ಅವರಿಗೆ ಸಂಬಂಧಿಸಿದ ಕನಸುಗಳು ಹೆಚ್ಚು ಹೆಚ್ಚು ಬರುತ್ತವೆ. ಮಾಜಿ ಪ್ರೇಮಿಗಳು ನಮ್ಮ ಕನಸಿನಲ್ಲಿ ಬರಲು ಕಾರಣವೇನೆಂದು ನಾವೀಗ ತಿಳಿಸುತ್ತೇವೆ ಮುಂದೆ ಓದಿ.
ಕಳೆದ 26 ವರ್ಷಗಳಿಂದ ಕನಸುಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಇಂಗ್ಲಿಷ್ ಲೇಖಕಿ ಥೆರೆಸಾ ಚೆಯುಂಗ್, "ದಿ ಡ್ರೀಮ್ ಡಿಕ್ಷನರಿ ಎ ಟು ಝಡ್" ಎಂಬ ಪುಸ್ತಕವನ್ನು ಬರೆದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಥೆರೆಸಾ ಚೆಯುಂಗ್, ಮಾಜಿ ಸಂಗಾತಿಯನ್ನು ಕನಸಿನಲ್ಲಿ ನೋಡುವುದರ ಅರ್ಥವನ್ನು ವಿವರಿಸಿದ್ದಾರೆ. ಅವರ ಪ್ರಕಾರ, ಮಾಜಿ ಲವರ್ ಕನಸಿನಲ್ಲಿ ಕಂಡರೆ ನೀವು ಇನ್ನೂ ನಿಮ್ಮ ಮಾಜಿ ಪ್ರೇಮಿಯನ್ನು ಪ್ರೀತಿಸುತ್ತೀರಿ ಅಥವಾ ಅವರು ನಿಮ್ಮನ್ನು ಪ್ರೀತಿಸುತ್ತಾರೆ ಎಂದು ಸೂಚಿಸುತ್ತದೆ.
ಕನಸಿನಲ್ಲಿ ಮಾಜಿ ಲವರ್ಗಳನ್ನು ನೋಡುವುದು ನೀವು ಕೆಲಸಗಳನ್ನು ಅರ್ಧಕ್ಕೆ ಬಿಟ್ಟಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಕೆಲವೊಮ್ಮೆ ಅಂತಹ ಕನಸು ನೀವು ನಿಮ್ಮ ಮಾಜಿ ಸಂಗಾತಿಯೊಂದಿಗೆ ಮಾಡಿದ ತಪ್ಪನ್ನು ಭವಿಷ್ಯದಲ್ಲಿ ಮಾಡಬಾರದು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಮಾಜಿ ಸಂಗಾತಿಯು ನಿಮ್ಮ ಜೀವನದಲ್ಲಿ ಉತ್ಸಾಹ ಅಥವಾ ಸಾಹಸದ ಮೂಲವಾಗಿರಬಹುದು. ನಿಮ್ಮ ಜೀವನದಲ್ಲಿ ಈಗ ಏನು ಕಾಣೆಯಾಗಿದೆ, ನಿಮ್ಮ ಹೃದಯವು ಏನು ಬಯಸುತ್ತದೆ, ಅದು ನಿಮಗೆ ನಿಮ್ಮ ಮಾಜಿ ಸಂಗಾತಿಯ ಮೂಲಕ ನೆನಪಿಸುತ್ತಿರಬಹುದು ಎಂದು ಥೆರೆಸಾ ಹೇಳುತ್ತಾರೆ.
ನಿಮ್ಮ ಮಾಜಿ ಸಂಗಾತಿಯ ಪ್ರಾಮುಖ್ಯತೆಯನ್ನು ನಿಮಗೆ ತಿಳಿಸಲು ನಿಮ್ಮ ಮೆದುಳು ಕನಸಿನ ರೂಪದಲ್ಲಿ ನಿಮಗೆ ಸಂಕೇತಗಳನ್ನು ನೀಡುತ್ತದೆ. ನಿಮ್ಮ ಮಾಜಿ ಸಂಗಾತಿಯು ನಿಮ್ಮ ಜೀವನದಲ್ಲಿ ಮುಖ್ಯ. ಅವರು ಯಾವಾಗಲೂ ನಿಮ್ಮ ಮನಸ್ಸಿನಲ್ಲಿರುತ್ತಾರೆ. ಈ ಕನಸು ನೀವು ಅವರ ಬಗ್ಗೆ ಮತ್ತೊಮ್ಮೆ ಯೋಚಿಸಬೇಕು ಮತ್ತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸೂಚಿಸುತ್ತದೆ. ನೀವು ಅಂತಹ ಕನಸು ಕಂಡಾಗ, ನೀವು ನಿಮ್ಮ ವ್ಯಕ್ತಿತ್ವದ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೀರಿ, ನಿಮ್ಮನ್ನು ನೀವು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೀರಿ ಎಂದು ಥೆರೆಸಾ ಹೇಳುತ್ತಾರೆ.
ಕನಸಿನಲ್ಲಿ ಮಾಜಿ ಪ್ರೇಮಿಯನ್ನು ನಾವು ವಿವಿಧ ರೀತಿಯಲ್ಲಿ ನೋಡಬಹುದು. ಕನಸಿನ ವಿಜ್ಞಾನದ ಪ್ರಕಾರ, ಇದಕ್ಕೆ ವಿಭಿನ್ನ ಅರ್ಥಗಳಿವೆ. ನಿಮ್ಮ ಮಾಜಿ ಸಂಗಾತಿಯು ಕನಸಿನಲ್ಲಿ ಸಿಹಿತಿಂಡಿಗಳನ್ನು ತಿನ್ನುವುದನ್ನು ನೋಡುವುದು ನೀವು ಮತ್ತೆ ಭೇಟಿಯಾಗುತ್ತೀರಿ ಎಂಬುದರ ಸಂಕೇತವಾಗಿದೆ. ನಿಮ್ಮ ಮಾಜಿ ಸಂಗಾತಿಯು ನಿಮ್ಮ ಕನಸಿನಲ್ಲಿ ನಗುತ್ತಿರುವುದನ್ನು ನೋಡುವುದು ಎಂದರೆ ಅವರಿನ್ನೂ ನಿಮ್ಮನ್ನು ಬಯಸುತ್ತಾರೆ ಮತ್ತು ನೀವು ಇನ್ನೂ ಅವರನ್ನು ಬಯಸುತ್ತೀರಿ ಎಂದರ್ಥ. ನಿಮ್ಮ ಮಾಜಿ ಸಂಗಾತಿಯು ಕೆಂಪು ಉಡುಪನ್ನು ಧರಿಸಿರುವುದು ಕಂಡುಬಂದರೆ, ನೀವು ಅವರೊಂದಿಗೆ ಮಾತನಾಡಲು ಬಯಸುತ್ತೀರಿ ಎಂದರ್ಥ. ಅವರೊಂದಿಗೆ ವಿವಾಹವಾಗುವ ಸಾಧ್ಯತೆ ಇದೆ ಎಂಬುದರ ಸಂಕೇತವಾಗಿದೆ. (ಏಜೆನ್ಸೀಸ್)