ಮೊದಲ​ ಚಿತ್ರಕ್ಕೆ ಮೊನಾಲಿಸಾ ಪಡೆದ ಸಂಭಾವನೆ ಎಷ್ಟು ಗೊತ್ತೇ? ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ | Monalisa

ವಿಜಯವಾಣಿ - 2025-02-08T190447.827
Published on

Monalisa: ಕೆಲವು ವಾರಗಳ ಹಿಂದೆಯಷ್ಟೇ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ತನ್ನ ಜೇನುಗಣ್ಣಿನಿಂದಲೇ ಜನರನ್ನು ಆಕರ್ಷಿಸಿದ ರುದ್ರಾಕ್ಷಿ ಮಾರುವ ಮೊನಾಲಿಸಾ, ಇದೀಗ ಬಾಲಿವುಡ್​ ಅಂಗಳಕ್ಕೂ ಕಾಲಿಟ್ಟ ಸಂಗತಿ ಅನೇಕರನ್ನು ಅಚ್ಚರಿಗೆ ದೂಡಿದೆ ಎಂಬುದರಲ್ಲಿ ಅನುಮಾನವೇ ಬೇಡ. 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳದಲ್ಲಿ ಅಪಾರ ಸಂಖ್ಯೆಯ ಜನರ ಗಮನಸೆಳೆದವರ ಪೈಕಿ ಮೊನಾಲಿಸಾ ಕೂಡ ಒಬ್ಬಳು. ಸದ್ಯ ದಿನದಿಂದ ದಿನಕ್ಕೆ ಆಕೆಯ ಜನಪ್ರಿಯತೆ ಕೂಡ ಹೆಚ್ಚಾಗುತ್ತಿದೆ. ಈಗಾಗಲೇ ಒಂದು ಬಾಲಿವುಡ್​ ಚಿತ್ರಕ್ಕೆ ಸಹಿ ಮಾಡಿರುವುದು ನಿಜಕ್ಕೂ ಗಮನಾರ್ಹ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮಣಿಗಳಿಂದ ತಯಾರಿಸಿರುವ ಹಾರ ಮತ್ತು ರುದ್ರಾಕ್ಷಿಗಳನ್ನು ಮಾರಾಟ ಮಾಡಲು ಬಂದ ಈ ಯುವತಿ, ಅಲ್ಪಾವಧಿಯಲ್ಲಿ ಎಷ್ಟು ಪ್ರಸಿದ್ಧಿಯಾಗಿದ್ದಾಳೆ ಎಂಬುದನ್ನು ಹೆಚ್ಚಾಗಿ ಹೇಳಬೇಕಾಗಿಲ್ಲ. ತನ್ನ ಸುಂದರ ಕಣ್ಣುಗಳು ಮತ್ತು ಆಕರ್ಷಕ ನಗುವಿನಿಂದಲೇ ರಾತ್ರೋರಾತ್ರಿ ಸೆಲೆಬ್ರಿಟಿಯಾದವಳು ಈಕೆ. ಕೇವಲ ಆಕೆಯ ಒಂದೇ ಒಂದು ವಿಡಿಯೋ ದೇಶ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತು. ವೈರಲ್ ಆದ ಬೆನ್ನಲ್ಲೇ ಮೊನಾಲಿಸಾಳನ್ನು ಸಂಪರ್ಕಿಸಿದ ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ, ತಮ್ಮ ಮುಂಬರುವ ಚಿತ್ರದಲ್ಲಿ ಜೇನುಗಣ್ಣಿನ ಸುಂದರಿಗೆ ಒಂದು ಪಾತ್ರವನ್ನು ನೀಡುವುದಾಗಿ ಹೇಳಿದ್ದರು. ಈಗ ತಮ್ಮ ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ.

ನಟನೆ ಕುರಿತಂತೆ ತರಬೇತಿ

ಸನೋಜ್ ಮಿಶ್ರಾ ನಿರ್ದೇಶನದಲ್ಲಿ ಮೂಡಿಬರಲಿರುವ 'ದಿ ಡೈರಿ ಆಫ್ ಮಣಿಪುರ' ಚಿತ್ರದಲ್ಲಿ ಮೊನಾಲಿಸಾ ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ಹಳ್ಳಿ ಹುಡುಗಿಗೆ ಒಂದು ಪ್ರಮುಖ ಹಾಗೂ ವಿಶೇಷ ಪಾತ್ರ ನೀಡಲಾಗಿದೆ ಎಂದು ವರದಿ ಹೇಳಿದೆ. ಮೊನಾಲಿಸಾ ಅವರ ಊರಿಗೆ ಹೋಗಿ ಈ ಬಗ್ಗೆ ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ತಿಳಿಸಿ ಮನವರಿಕೆ ಮಾಡಿದ ನಿರ್ದೇಶಕರು, ಸಿನಿಮಾಗೆ ಸಂಬಂಧಿಸಿದಂತೆ ಮೊನಾಲಿಸಾ ಜತೆ ಒಪ್ಪಂದ ಕೂಡ ಮಾಡಿಕೊಂಡಿದ್ದಾರೆ. ಚಿತ್ರೀಕರಣ ಪ್ರಾರಂಭವಾಗಲು ಇನ್ನೂ ಕೆಲವೇ ದಿನಗಳು ಬಾಕಿಯಿದೆ. ಈ ಮಧ್ಯೆ, ಮೊನಾಲಿಸಾಗೆ ನಟನೆ ಕುರಿತಂತೆ ತರಬೇತಿ ನೀಡಲಾಗುತ್ತಿದೆ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.

21 ಲಕ್ಷ ರೂ. ಜತೆಗೆ

ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಿಕೊಂಡಿದ್ದ ಹುಡುಗಿ, ಈಗ ಏಕಾಏಕಿ ಬಾಲಿವುಡ್​ಗೆ ಎಂಟ್ರಿ ಕೊಟ್ಟಿರುವುದು ಅನೇಕರ ಹುಬ್ಬೇರಿಸಿದೆ. ದಿನದಿಂದ ದಿನಕ್ಕೆ ಮೊನಾಲಿಸಾ ಜನಪ್ರಿಯತೆ ಹೆಚ್ಚುತ್ತಿರುವುದು ಹಲವರ ಗಮನ ಸೆಳೆದಿದೆ. ಅಸಲಿಗೆ ಆಕೆ ನಟಿಸುತ್ತಿರುವುದೇನೋ ನಿಜ. ಆದರೆ, ಆಕೆಗೆ ಸಿಗುವ ಸಂಭಾವನೆ ಎಷ್ಟು? ಹೊಸ ಹುಡುಗಿಗೆ ಕಡಿಮೆ ಕೊಟ್ಟಿರಬಹುದಾ ಎಂಬ ಹತ್ತು ಹಲವು ಪ್ರಶ್ನೆಗಳು ಜಾಲತಾಣವನ್ನು ಸುತ್ತುವರೆದಿವೆ. ಇದಕ್ಕೆ ಪುಷ್ಠಿ ನೀಡುವಂತೆ ಆಕೆಯ ಮೊದಲ ಚಿತ್ರದ ಸಂಭಾವನೆ ಮಾಹಿತಿ ಕೂಡ ಹೊರಬಿದ್ದಿದೆ.

ಈ ಬಗ್ಗೆ ಸುದ್ದಿಯೊಂದು ಪ್ರಸ್ತುತ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, 'ದಿ ಡೈರಿ ಆಫ್ ಮಣಿಪುರ' ಚಿತ್ರಕ್ಕಾಗಿ ಮೊನಾಲಿಸಾ ಬರೋಬ್ಬರಿ 21 ಲಕ್ಷ ರೂ. ಹಣ ಪಡೆದಿದ್ದಾರೆ. ಇದರೊಟ್ಟಿಗೆ ಸ್ಥಳೀಯ ವ್ಯವಹಾರ ಪ್ರಚಾರಗಳಿಗಾಗಿ (ಲೋಕಲ್​ ಬ್ರ್ಯಾಂಡಿಂಗ್) 15 ಲಕ್ಷ ರೂ. ಮೌಲ್ಯದ ಒಪ್ಪಂದವನ್ನೂ ಪಡೆದಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಸದ್ಯ ಈ ಸಂಗತಿ ನೆಟ್ಟಿಗರ ಅಚ್ಚರಿಗೆ ಕಾರಣವಾಗಿದ್ದು, ಅದೃಷ್ಟ ಎಂದರೆ ಹೀಗಿರಬೇಕು ಎನ್ನುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net