ಗದಗ: ಪಂಚಮಸಾಲಿ ಸಮಾಜ ಸೇವಾ ಟ್ರಸ್ಟ್ ಗದಗ ಆಶ್ರಯದಲ್ಲಿ ಫೆ. 11ರಂದು ಬೆಳಗ್ಗೆ ೧೦.೩೦ಕ್ಕೆ ಇಲ್ಲಿನ ಕಳಸಾಪುರ ರಸ್ತೆಯಲ್ಲಿರುವ ಬ್ರೈಟ್ ಹಾರಿಜೋನ್ ಶಾಲೆ ಪಕ್ಕದಲ್ಲಿ ಕಿತ್ತೂರು ಚನ್ನಮ್ಮ ಭವನದ ಭೂಮಿಪೂಜೆ ಸಮಾರಂಭ ನಡೆಯಲಿದೆ ಎಂದು ಟ್ರಸ್ಟಿನ ಅಧ್ಯಕ್ಷ ಮೋಹನ ಮಾಳಶೆಟ್ಟಿ ಹೇಳಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾಪತಿ ಬಸವರಾಜ ಹೊರಟ್ಟಿ ಘನ ಉಪಸ್ಥಿತಿ ವಹಿಸುವರು. ಭೂಮಿಪೂಜೆಯನ್ನು ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್ .ಕೆ. ಪಾಟೀಲ ನೆರವೇರಿಸುವರು. ಕಾರ್ಯಕ್ರಮವನ್ನು ನರಗುಂದ ಶಾಸಕ ಸಿ.ಸಿ. ಪಾಟೀಲ ಉದ್ಘಾಟಿಸುವರು. ಮುಖ್ಯ ಅತಿಥಿಗಲಾಗಿ ಸಂಸದ ಬಸವರಾಜ ಹೊರಟ್ಟಿ, ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ , ವಿಧಾನ ಪರಿಷತ್ ಸದಸ್ಯ ಎಸ್ .ವಿ . ಸಂಕನೂರ, ಪ್ರದೀಪ ಶೆಟ್ಟರ್ , ಮಾಜಿ ಶಾಸಕ ಕಳಕಪ್ಪ ಬಂಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ ಆಗಮಿಸಲಿದ್ದಾರೆ ಎಂದರು.
ಸುಮಾರು ೩೮ ಸಾವಿರ ಚದರ್ ಅಡಿ ವಿಶಾಲವಾದ ಜಾಗವನ್ನು ವಂತಿಗೆ ಮೂಲಕ ಸಂಗ್ರಹಿಸಿ ಖರೀದಿಸಲಾಗಿದೆ. ಒಟ್ಟು ೭ ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಜಿಲ್ಲಾಉಸ್ತುವಾರಿ ಸಚಿವ ಎಚ್ .ಕೆ. ಪಾಟೀಲರು ಈಗಾಗಲೇ ೧ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಿವರಾಜಗೌಡ ಹಿರೇಮನಿಪಾಟೀಲ, ಸಿದ್ದು ಪಲ್ಲೇದ,ಅಶೋಕ ಸಂಕಣ್ಣವರ, ಅನಿಲಕುಮಾರ ಪಾಟೀಲ, ಸಂಗಮೇಶ ಕವಳಿಕಾಯಿ, ಸಂತೋಷ ಅಕ್ಕಿ, ಶಾಂತಣ್ಣ ಮುಳವಾಡ, ವಿಶ್ವನಾಥ ಹಳ್ಳಿಕೇರಿ, ಸುರೇಶ ಚಿತ್ತರಗಿ ಇತರರ ಉಪಸ್ಥಿತರಿದ್ದರು.
TAGGED:*ಗದಗ