95ರಷ್ಟು ಕನಸು ಎದ್ದ 5 ನಿಮಿಷಕ್ಕೆ ಡಿಲೀಟ್​​! 24 ಗಂಟೆಯೂ ಕೆಲಸ ಮಾಡುವ ಮೆದುಳಿನ ಬಗ್ಗೆ ಇಲ್ಲಿದೆ ರೋಚಕ ಸಂಗತಿ

ನಿದ್ರೆಯಲ್ಲಿದ್ದಾಗ ಬೀಳುವ ಕನಸುಗಳು
ನಿದ್ರೆಯಲ್ಲಿದ್ದಾಗ ಬೀಳುವ ಕನಸುಗಳು
Published on

ಪ್ರಮುಖ ಮುಖ್ಯಾಂಶಗಳು

  • ಮೆದುಳು ಮಾತ್ರ ಬಹುಮುಖ್ಯ ಹಾಗೂ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಅಂಗ
  • ಕನಸಿನಲ್ಲಿ ಕಂಡ ಚಿತ್ರಣ ಎದ್ದ 5 ನಿಮಿಷಗಳಲ್ಲೇ ಡಿಲೀಟ್​
  • ನೆನಪಿಸಿಕೊಳ್ಳಲು ಪ್ರಯತ್ನಿಸಿದರೂ ಗೋಚರಿಸುವುದಿಲ್ಲ ಎಂಬುದಕ್ಕೆ ಇದೇ ಕಾರಣ
Human Brain: ಮನುಷ್ಯನ ದೇಹದಲ್ಲಿ ಹೃದಯ, ಕರುಳು, ಕಿಡ್ನಿ, ಲಿವರ್​, ಕಣ್ಣು ಸೇರಿದಂತೆ ಎಲ್ಲ ಅಂಗಾಗಳು ಮುಖ್ಯವೇ. ಈ ಪೈಕಿ ನಮ್ಮ ಮೆದುಳು ಮಾತ್ರ ಬಹುಮುಖ್ಯ ಹಾಗೂ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಅಂಗ ಎಂದೇ ಹೇಳಬಹುದು. ಒಂದು ಸಣ್ಣ ವಸ್ತುಗಳನ್ನು ಕಂಡಾಗ, ಏನಾದರೂ ಸ್ಪರ್ಶಿಸಿದಾಗ ಅಥವಾ ದೇಹದೊಳಗೆ ಆಗುವ ಚಲನವಲನಗಳನ್ನು ಬಹುಬೇಗ ಗ್ರಹಿಸುವುದೇ ಈ ಮಿದುಳು. ಇಲ್ಲಿಂದಲೇ ಮುಂದಿನ ಬೆಳವಣಿಗೆಗಳು. ನಮ್ಮ ಅಂಗೈ ಅಗಲದಷ್ಟಿರುವ ಸಣ್ಣ ಮೆದುಳಿನಲ್ಲಿ ನಮಗೇ ಗೊತ್ತಿರದ ಹಲವು ರೋಚಕ ವಿಷಯಗಳು ಅಡಗಿವೆ.
ಪ್ರತಿ ರಾತ್ರಿ ನಾವು ಮಲಗಿದಾಗ ನಮಗೆ ಅರಿವಿಲ್ಲದೆಯೇ ನಾವು ಒಂದು ಯಾವುದೇ ಕಪಲೋ ಕಲ್ಪಿತ ಜಗತ್ತನ್ನೇ ಸುತ್ತಿ ಬರುತ್ತವೆ, ಗೊತ್ತಿರದ ವಿಷಯಗಳ ಬೆನ್ನೇರುತ್ತೇವೆ. ನಮ್ಮ ಪ್ರೀತಿ-ಪಾತ್ರರು ಅಥವಾ ಯಾವುದಾದರೂ ಕಹಿ ಘಟನೆಗಳನ್ನು ಕನಸಿನ ಮೂಲಕ ನೋಡುವುದು, ಇಲ್ಲವೇ ಅದು ನೈಜವಾಗಿಯೇ ನಡೆಯುತ್ತಿದೆ ಎಂದು ಭಾಸವಾಗುವುದು ತೀರ ಸಾಮಾನ್ಯ. ಕನಸಿನಲ್ಲಿ ಮಾಯ ಲೋಕಕ್ಕೆ ಹೋಗುವ ನಾವು, ಕನಸಿನಲ್ಲಿಯೂ ಎಚ್ಚರುತ್ತೇವೆ. ಆದರೆ, ಎದ್ದ ಮೇಲೆ ತಿಳಿಯುತ್ತೆ, ಅದೊಂದು ಕನಸು ಅಂತ.

ಕನಸಿನಲ್ಲಿ ಏನೋ ಮಾಡುತ್ತಿರುವ ಅನುಭವ

ನಾವು ಕಣ್ಣು ಮುಚ್ಚಿದಾಗ ಈ ಬಣ್ಣದ ಜಗತ್ತು, ಕನಸಿನಲ್ಲಿ ವ್ಯಕ್ತಿಗಳ ಎಂಟ್ರಿ ಮತ್ತು ಚಿತ್ರಣಗಳು ಮೆದುಳಿನಲ್ಲಿ ಹೇಗೆ ಶುರುವಾಗುತ್ತೆ? ಎಂಬ ಪ್ರಶ್ನೆ ಕೆಲವೇ ಕೆಲವರಲ್ಲಿ ಕಾಡಿರುತ್ತದೆ. ಸಂಶೋಧಕರ ವಿಶ್ಲೇಷಣೆಯ ಪ್ರಕಾರ, ನಾವು ನಿದ್ರೆಗೆ ಜಾರಿದಾಗ, ನಮ್ಮ ಮೆದುಳು ಕಿಂಚಿತ್ತು ವಿಶ್ರಾಂತಿ ಪಡೆಯೋದಿಲ್ಲ. ವಿಶೇಷವಾಗಿ, ಎಚ್ಚರವಿದ್ದಾಗ ಇಲ್ಲದ ಚುರುಕುತನ, ನಿದ್ರೆಗೆ ಜಾರಿದಾಗಲೇ ವೇಗವಾಗಿರುತ್ತದೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ 'ಕ್ಷಿಪ್ರ ಕಣ್ಣಿನ ಚಲನೆ' (REM) ಎಂದು ಕರೆಯಲಾಗುತ್ತದೆ.

ಇದೇ ಕಾರಣ

ಈ ಹಂತದಲ್ಲಿ, ನಮ್ಮ ಕಣ್ಣುಗುಡ್ಡೆಗಳು ನಮ್ಮ ಕಣ್ಣುರೆಪ್ಪೆಗಳ ಹಿಂದೆ ವೇಗವಾಗಿ ಚಲಿಸುತ್ತವೆ. ನಮ್ಮ ಮೆದುಳಿನ ಭಾಗಗಳು, ನೆನಪುಗಳ ಭಂಡಾರವಾಗಿರುವ ಹಿಪೊಕ್ಯಾಂಪಸ್ (Hippocampus) ಮತ್ತು ಭಾವನೆಗಳನ್ನು ಕಂಟ್ರೋಲ್​ ಮಾಡುವ ಅಮಿಗ್ಡಾಲಾ (Amygdala) ಈ ಸಮಯದಲ್ಲಿ ಅತ್ಯಂತ ಸಕ್ರಿಯವಾಗುತ್ತವೆ. ಹೀಗಾಗಿಯೇ, ನಾವು ನಮ್ಮ ಕನಸಿನಲ್ಲಿ ಖುಷಿ, ಭಯ ಮತ್ತು ಆತಂಕದಂತಹ ಭಾವನೆಗಳನ್ನು ಹೆಚ್ಚಾಗಿ ಅನುಭವಿಸುತ್ತೇವೆ.

ಕನಸಿನ ಲೋಕ

ವಾಸ್ತವವಾಗಿ, ಕನಸುಗಳನ್ನು ರಚಿಸುವುದು ನಮ್ಮ ಮೆದುಳು ಮಾಡುವ ಒಂದು ದೊಡ್ಡ ಡೇಟಾ ಸಂಸ್ಕರಣೆ. ನಾವು ದಿನವಿಡೀ ಸಂಗ್ರಹಿಸಿದ ಮಾಹಿತಿಯನ್ನು, ಆಲಿಸಿದ ಪದಗಳನ್ನು ಮತ್ತು ನಾವು ನೋಡಿದ ದೃಶ್ಯಗಳನ್ನು ಸಣ್ಣ ತುಂಡುಗಳಾಗಿ ವಿಭಜಿಸಿ, ಅವುಗಳನ್ನು ಹಳೆಯ ನೆನಪುಗಳೊಂದಿಗೆ ಸೇರಿಸುತ್ತದೆ ಮತ್ತು ಹೊಸ ಕಥೆಯನ್ನು ನಮ್ಮ ಮುಂದಿಡುತ್ತದೆ. ಅದಕ್ಕಾಗಿಯೇ, ನಾವು ತುಂಬಾ ಒತ್ತಡದಲ್ಲಿರುವಾಗ ಅಥವಾ ಯಾವುದನ್ನಾದರೂ ಕುರಿತು ಹೆಚ್ಚು ಯೋಚಿಸುತ್ತಿರುವಾಗ ದುಃಸ್ವಪ್ನಗಳು ಕಾಡುವ ಸಾಧ್ಯತೆ ಹೆಚ್ಚು. ಇದೊಂದು ರೀತಿ ನಮ್ಮ ಮಾನಸಿಕ ಆರೋಗ್ಯವನ್ನು ರಕ್ಷಿಸಲು ಮಿದುಳು ಮಾಡುವ ನೈಸರ್ಗಿಕ ಪ್ರಯತ್ನ.

ಇನ್ನೊಂದು ಆಘಾತಕಾರಿ ಸಂಗತಿ

ಆಶ್ಚರ್ಯಕರ ಸಂಗತಿ ಏನೆಂದರೆ, ನಮ್ಮ ಮೆದುಳು ಎದ್ದ ಐದು ನಿಮಿಷಗಳಲ್ಲಿ ರಾತ್ರಯಿಡೀ ಸೃಷ್ಟಿಸಿದ್ದ ಕನಸುಗಳನ್ನು ಮೆಮೋರಿಯಿಂದಲೇ ಡಿಲೀಟ್​ ಮಾಡಿಬಿಡುತ್ತವೆ. ಇದಕ್ಕೆ ಮುಖ್ಯ ಕಾರಣ ನಮ್ಮ ದೇಹದಲ್ಲಿನ ರಾಸಾಯನಿಕ ಬದಲಾವಣೆಗಳು. ನಿದ್ರೆಯ ಸಮಯದಲ್ಲಿ, ಮೆದುಳಿನಲ್ಲಿ ನೆನಪುಗಳನ್ನು ಸ್ಥಿರಗೊಳಿಸುವ 'ನೊರ್ಪೈನ್ಫ್ರಿನ್' ಕೆಮಿಕಲ್​ನ ಮಟ್ಟಗಳು ಕಡಿಮೆಯಾಗುತ್ತವೆ. ಇದರಿಂದಾಗಿ ಕನಸುಗಳು ನಮ್ಮ ನೆನಪಿನ ಶಕ್ತಿಯಲ್ಲಿ ಉಳಿಯೋದಿಲ್ಲ.
ಇದಲ್ಲದೆ, ನಮ್ಮ ಮೆದುಳು ಕನಸುಗಳನ್ನು ಕೇವಲ ತಾತ್ಕಾಲಿಕ ಮಾಹಿತಿ ಎಂದು ಪರಿಗಣಿಸುತ್ತದೆ. ಹೀಗಾಗಿಯೇ, ಅವುಗಳನ್ನು ನಾವು ಮುಂದೊಂದು ದಿನ ಹೀಗಾಗಿತ್ತು ಎಂದು ಹೇಳಲು ಮೆಮೋರಿಯಲ್ಲಿ ಉಳಿದಿರುವುದಿಲ್ಲ. ನೀವು ಕನಸು ಕಾಣುತ್ತಿರುವಾಗ ಯಾರಾದರೂ ಇದ್ದಕ್ಕಿದ್ದಂತೆ ನಿಮ್ಮನ್ನು ಬಡಿದೆಬ್ಬಿಸಿದರೆ, ನೀವದನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಅವಕಾಶವಿರುತ್ತದೆ. ಆದರೆ ನೀವು ಮತ್ತೆ ನಿದ್ರಿಸಿದರೆ, ಅದು ಅಲ್ಲಿಗೆ ಕೊನೆಯಾಗುತ್ತದೆ.

ನಿಮಗೆ ಗೊತ್ತಿರುವವರೇ...

ಇನ್ನೊಂದು ಅಚ್ಚರಿ ಸಂಗತಿಯೆಂದರೆ, ನಾವು ಕನಸಿನಲ್ಲಿ ನೋಡುವ ಯಾವುದೇ ಮುಖಗಳು ಹೊಸದಲ್ಲ. ನಮ್ಮ ಮೆದುಳು ತಾವಾಗಿಯೇ ಮುಖ ಚಹರೆಯನ್ನು ಸೃಷ್ಟಿ ಮಾಡೋದಿಲ್ಲ. ನಾವು ಎಲ್ಲೋ, ನಮ್ಮ ಜೀವನದಲ್ಲಿ ಹಲವು ಪ್ರಸಂಗಗಳ ನಡುವೆ ನೋಡಿದ ಜನರನ್ನು ಮಾತ್ರ ಅವು ನಮ್ಮ ಕನಸುಗಳಲ್ಲಿ ತರುತ್ತವೆ. ಅದು ಸಂದರ್ಭಕ್ಕೆ ತಕ್ಕಂತೆ ಅಥವಾ ತನಿಷ್ಟಕ್ಕೆ. ನಾವು ಕನಿಷ್ಠ ಒಂದು ಸೆಕೆಂಡ್ ನೋಡುವ ಮುಖ ಕೂಡ ನಮ್ಮ ಮೆದುಳಿನಲ್ಲಿ ಸಂಗ್ರಹವಾಗುತ್ತದೆ ಮತ್ತು ಕನಸಿನಲ್ಲಿ ಯಾವುದಾದರೂ ಸಮಯದಲ್ಲಿ ಬಂದೋಗಿರುತ್ತದೆ. ಕೆಲವು ನೆನಪಾದರೆ, ಹಲವು ನೆನಪಿನಿಂದಲೇ ಡಿಲೀಟ್​ ಆಗಿರುತ್ತವೆ ಎಂಬುದು ನಿಜಕ್ಕೂ ಅಚ್ಚರಿ ಸಂಗತಿಗಳೇ ಸರಿ.

ನೆನಪಿಗೆ ಬರುತ್ತೆ! ಆದ್ರೆ...

ನೀವು ಕಂಡ ಕನಸನ್ನು ಎಚ್ಚರವಾದ ಬಳಿಕ ಅದಾಗಲೇ ಮರೆತು ಹೋಗಿರುತ್ತೀರಿ. ಇಲ್ಲ, ಅದೇನು ಅನ್ನೋದನ್ನು ನಾನು ತಿಳಿಯಬೇಕಿತ್ತು ಎಂದು ಬಯಸಿದ್ದೇ ಆದರೆ, ಕನಸಿನಲ್ಲಿ ತೇಲಾಡಿದ ಬಳಿಕ ದಿಢೀರ್​ ಎಚ್ಚರವಾದರೆ, ಅಲುಗಾಡದೆ ಮಲಗಿರುವ ಸ್ಥಳದಲ್ಲೇ ಮಲಗಿಕೊಂಡು ಚಿತ್ರಣಗಳನ್ನು ಕಲೆಹಾಕಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ನೆನಪಿಸಿಕೊಳ್ಳುವ ಸಾಧ್ಯತೆಗಳಿವೆ. ಅಲುಗಾಡಿದರೆ, ಕಂಪ್ಯೂಟರ್​ ರೀತಿ ಕ್ಷಣಮಾತ್ರದಲ್ಲಿ ಡಿಲೀಟ್​ ಆಗಿರುತ್ತವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net