

Mobile : ಪ್ರಸ್ತುತ ಯುಗದಲ್ಲಿ ಸ್ಮಾರ್ಟ್ಫೋನ್ಗಳ ಅತಿಯಾದ ಬಳಕೆಯು ಜನರ ನಡುವಿನ ವೈಯಕ್ತಿಕ ಸಂಬಂಧಗಳನ್ನು ಹಾಳುಮಾಡುತ್ತಿದೆ. ಕೂತರು, ನಿಂತರು ಹಾಗೂ ಮಲಗಿದರೂ ಮೊಬೈಲ್ ಬೇಕೇ ಬೇಕು. ಊಟ ಮಾಡುವಾಗ, ಪ್ರಯಾಣ ಮಾಡುವಾಗ ಮತ್ತು ನಿತ್ಯ ಕರ್ಮಗಳನ್ನು ಮುಗಿಸುವಾಗಲೂ ಮೊಬೈಲ್ ಕೈಯಲ್ಲಿ ಹಿಡಿದಿರಲೇ ಬೇಕು. ಮೊಬೈಲ್ ಇಲ್ಲದಿದ್ದರೆ ಕೈಕಾಲುಗಳೇ ಓಡುವುದಿಲ್ಲ, ಏನೋ ಕಳೆದುಕೊಂಡಂತೆ ಚಡಿಪಡಿಸುತ್ತೇವೆ ಎಂದು ಹೇಳುವ ಅನೇಕ ಮಂದಿ ಇದಾರೆ.
ಆದರೆ, ಸುಮಾರು 30 ವರ್ಷಗಳ ಹಿಂದೆ ಪರಿಸ್ಥಿತಿ ಬೇರೇನೆ ಇತ್ತು. ಆಗ ಯಾವುದೇ ಫೋನ್ ಆಗಲಿ ಇರಲಿಲ್ಲ. ಯಾವುದೇ ಸಂವಹನಕ್ಕೂ ಪತ್ರವನ್ನು ಅವಲಂಬಿಸಿದ್ದರು. 1990ರ ದಶಕದಲ್ಲಿ ಭಾರತಕ್ಕೆ ಮೊಬೈಲ್ಗಳು ಎಂಟ್ರಿಯಾದವು. ಅಲ್ಲಿಂದಾಚೆಗೆ ಇಡೀ ಭಾರತದ ಚಿತ್ರಣವೇ ಬದಲಾಯ್ತು. ಅದರಲ್ಲೂ ಸ್ಮಾರ್ಟ್ಫೋನ್ಗಳ ಬಳಕೆ ಹೆಚ್ಚಾದಂತೆ ಮನುಷ್ಯನು ಕೂಡ ಅವುಗಳಿಗೆ ದಾಸನಾದನು. ಇಂದು ಫೋನ್ಗಳು ಮನುಷ್ಯನ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಮೊಬೈಲ್ ಇಲ್ಲದೇ ಇರುವುದೇ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿದ್ದೇವೆ.
ಮೊಬೈಲ್ಗೆ ಇಷ್ಟೆಲ್ಲ ಅಡಿಕ್ಟ್ ಆಗಿರುವ ಜನರಲ್ಲಿ ಭಾರತದಲ್ಲಿ ಮೊದಲ ಕರೆಯನ್ನು ಯಾರು ಮಾಡಿದರು ಎಂದು ಪ್ರಶ್ನಿಸಿದರೆ, ಬಹುತೇಕ ಮಂದಿ ಉತ್ತರ ಗೊತ್ತಿಲ್ಲ ಎಂದು ಹೇಳುತ್ತಾರೆ. ಆದರೆ, ನಾವಿಂದು ನಿಮಗೆ ಉತ್ತರವನ್ನು ತಿಳಿಸುತ್ತೇವೆ.
1995, ಜುಲೈ 31 ರಂದು ಆಗಿನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಅವರು ನೋಕಿಯಾ ಮೊಬೈಲ್ ಫೋನ್ ಬಳಸಿ ಭಾರತದ ಮೊದಲ ಮೊಬೈಲ್ ಫೋನ್ ಕರೆಯನ್ನು ಮಾಡಿದರು. ಎರಡು ಪ್ರಮುಖ ನಗರಗಳಾದ ಕೊಲ್ಕತ್ತ ಮತ್ತು ದೆಹಲಿ ನಡುವಿನ ಕರೆಯಾಗಿತ್ತು. ಆಗಿನ ಕೇಂದ್ರ ಸಂವಹನ ಸಚಿವ ಸುಖ್ ರಾಮ್ ಮತ್ತು ಜ್ಯೋತಿ ಬಸು ನಡುವೆ ಸಂಭಾಷಣೆ ನಡೆಯಿತು.
ಈ ಫೋನ್ ಕರೆಯನ್ನು ಭಾರತದ ಬಿ.ಕೆ. ಮೋದಿ ಗ್ರೂಪ್ ಮತ್ತು ಆಸ್ಟ್ರೇಲಿಯಾದ ಟೆಲ್ಸ್ಟ್ರಾ ನಡುವಿನ ಜಂಟಿ ಉದ್ಯಮವಾದ ಮೋದಿ ಟೆಲ್ಸ್ಟ್ರಾದ ಮೊಬೈಲ್ ನೆಟ್ ಸರ್ವೀಸ್ ಮೂಲಕ ಮಾಡಲಾಯಿತು. ಕೊಲ್ಕತ್ತಾದ ರೈಟರ್ಸ್ ಬಿಲ್ಡಿಂಗ್ ಮತ್ತು ನವದೆಹಲಿಯ ಸಂಚಾರ್ ಭವನದ ನಡುವೆ ಸಂಪರ್ಕ ಏರ್ಪಡಿಸಿತು.
ಆ ಸಮಯದಲ್ಲಿ ಇನ್ಕಮಿಂಗ್ ಮತ್ತು ಔಟ್ಗೋಯಿಂಗ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 8.4 ರೂಪಾಯಿ ವೆಚ್ಚವಾಗುತ್ತಿತ್ತು. ಕೆಲವೊಮ್ಮೆ ಬೇಡಿಕೆ ಸಮಯದಲ್ಲಿ, ವೆಚ್ಚವು ಪ್ರತಿ ನಿಮಿಷಕ್ಕೆ 16.8 ರೂಪಾಯಿಗೆ ಏರುತ್ತಿತ್ತು. ಈ ಸಾಂಕೇತಿಕ ಕರೆ ಭಾರತದ ಮೊಬೈಲ್ ಕ್ರಾಂತಿಯ ಆರಂಭವನ್ನು ಗುರುತಿಸಿತು. ಅಂದಿನಿಂದ, ಭಾರತದಲ್ಲಿ ಶುರುವಾದ ಫೋನ್ ಕ್ರಾಂತಿ, ಇಂದು ಭಾರತವು ಮೊಬೈಲ್ ಬಳಕೆದಾರರ ವಿಷಯದಲ್ಲಿ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಮಾರುಕಟ್ಟೆಯಾಗಿದೆ. (ಏಜೆನ್ಸೀಸ್)