

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಯಲ್ಲಿ ಜನಿಸುತ್ತಾನೆ ಎಂಬುದು ಆ ವ್ಯಕ್ತಿಯ ಭವಿಷ್ಯದ ಜೀವನ, ವ್ಯಕ್ತಿತ್ವ ಮತ್ತು ಪಾಸಿಟಿವ್ ಹಾಗೂ ನೆಗೆಟಿವ್ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋಷಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ರಾಶಿಗಳು ಮನುಷ್ಯ ಗುಣಗಳ ಮೇಲೆ ಅಗಾಧ ಪರಿಣಾಮ ಬೀರುತ್ತವೆ ಎಂದು ಹಿಂದು ಧರ್ಮದಲ್ಲಿ ನಂಬಲಾಗಿದೆ. ಅದೇ ರೀತಿ ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ದುರಹಂಕಾರಿಗಳಾಗಿರುತ್ತಾರಂತೆ. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ಸಿಂಹ ರಾಶಿಯಲ್ಲಿ ಜನಿಸಿದ ಜನರು ಸೂರ್ಯನ ಪ್ರಾಬಲ್ಯ ಹೊಂದಿರುವುದರಿಂದ, ಅವರು ಸ್ವಾಭಾವಿಕವಾಗಿ ಇತರರ ಮೇಲೆ ಪ್ರಾಬಲ್ಯ ಸಾಧಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಈ ರಾಶಿಯವರು ತುಂಬಾ ಸ್ವಾರ್ಥಿಗಳು ಮತ್ತು ಕೆಲವೊಮ್ಮೆ ಸಂಪೂರ್ಣವಾಗಿ ದುರಹಂಕಾರಿಗಳಂತೆ. ತಮಗೆ ಆದ್ಯತೆ ಸಿಗುವ ಸ್ಥಳದಲ್ಲಿ ಮಾತ್ರ ಇರಲು ಬಯಸುತ್ತಾರೆ. ಈ ಗುಣಗಳೇ ಕೆಲವೊಮ್ಮೆ ಅವರ ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸಬಹುದು. ಈ ರಾಶಿಯವರು ಒಮ್ಮೆ ನಿರ್ಧಾರ ತೆಗೆದುಕೊಂಡ ನಂತರ, ತಮ್ಮ ಮನಸ್ಸನ್ನು ಬದಲಾಯಿಸುವುದು ಕಷ್ಟ. ಅವರು ಎಲ್ಲದರಲ್ಲೂ ತಾವೇ ಸರಿ ಎಂದು ಭಾವಿಸುತ್ತಾರೆ.
ಧನುಸ್ಸು ರಾಶಿಯವರು ಇಡೀ ಜಗತ್ತೇ ತಮ್ಮ ಸುತ್ತ ಸುತ್ತಿದೆ ಎಂದು ಅಂದುಕೊಳ್ಳುತ್ತಾರೆ. ಅವರ ಸಾಹಸ ಪ್ರವೃತ್ತಿಯು ಕೆಲವೊಮ್ಮೆ ಅವರ ದುರಹಂಕಾರಕ್ಕೆ ಕನ್ನಡಿ ಹಿಡಿಯುತ್ತದೆ. ಧನುಸ್ಸು ರಾಶಿಯವರು ಆಕರ್ಷಕ, ಕುತೂಹಲಕಾರಿ ಮತ್ತು ಆಶಾವಾದಿಗಳಾಗಿರುತ್ತಾರೆ. ಆದಾಗ್ಯೂ, ಅವರ ಸಂತೋಷವು ಸ್ವಾರ್ಥ ಮತ್ತು ದುರಭಿಮಾನದಿಂದ ಬರುತ್ತದೆ. ಅವರು ಯಾವಾಗಲೂ ಸ್ವತಂತ್ರರಾಗಿರುತ್ತಾರೆ ಮತ್ತು ಇತರರನ್ನು ತಮ್ಮ ಸ್ವಾರ್ಥ ಉದ್ದೇಶಗಳಿಗಾಗಿ ಮಾತ್ರ ಬಳಸುತ್ತಾರೆ. ಎಲ್ಲರೂ ತಮ್ಮನ್ನು ಉದಾಹರಣೆಯಾಗಿ ಬಳಸಬೇಕೆಂದು ಭಾವಿಸುತ್ತಾರೆ. ತಾವು ಮಾತ್ರ ಸರಿ ಮತ್ತು ಇತರರು ತಮ್ಮ ತತ್ವಗಳನ್ನು ಗೌರವಿಸಬೇಕು ಎಂದು ಧನುಸ್ಸು ರಾಶಿಯವರು ಬಯಸುತ್ತಾರೆ.
ವೃಷಭ ರಾಶಿಯವರು ಸ್ವಾಭಾವಿಕವಾಗಿಯೇ ಯಾವುದಕ್ಕೂ ರಾಜಿ ಮಾಡಿಕೊಳ್ಳದ ಸ್ವಭಾವವನ್ನು ಹೊಂದಿರುತ್ತಾರೆ. ಅವರು ಯಾವಾಗಲೂ ಸರಿಯಾದದ್ದನ್ನೇ ಮಾಡುತ್ತಿದ್ದೇವೆ ಎಂದು ನಂಬುತ್ತಾರೆ. ಈ ರಾಶಿಯವರು ಎಷ್ಟು ಸ್ವಾರ್ಥಿಗಳೆಂದರೆ ಇತರರ ಅಗತ್ಯತೆಗಳು ಮತ್ತು ಭಾವನೆಗಳನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಅವರು ತಮ್ಮ ಚಿಂತೆಗಳನ್ನು ತಮ್ಮೊಳಗೆ ಮರೆಮಾಡಲು ಸೊಕ್ಕಿನಂತೆ ನಟಿಸುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.