

ಪ್ರತಿದಿನ ಬೆಳಗ್ಗೆ ಎದ್ದ ನಂತರ ನಾವು ಮಾಡುವ ಮೊದಲ ಕೆಲಸವೆಂದರೆ ಹಲ್ಲು ಉಜ್ಜುವುದು. ಹಲ್ಲುಜ್ಜುವಾಗ ನೀವು ಎಂದಾದರೂ ಗಮನ ಹರಿಸಿದ್ದರೆ, ಟೂತ್‌ಪೇಸ್ಟ್ ಟ್ಯೂಬ್ನ ಕೆಳಭಾಗದಲ್ಲಿ ಕಲರ್ ಬಾರ್ ಇರುವುದನ್ನು ನೀವು ನೋಡಿರಬೇಕು. ಕೆಂಪು, ಹಸಿರು, ಕಪ್ಪು ಮತ್ತು ನೀಲಿ ಬಣ್ಣದಿಂದ ಮಾಡಿದ ಈ ಪಟ್ಟೆಗಳ ಅರ್ಥವನ್ನು ತಿಳಿದುಕೊಳ್ಳಲು ನೀವು ಯೋಚಿಸಿರುವುದಿಲ್ಲ. ಈ ಬಣ್ಣದ ಪಟ್ಟಿಗಳನ್ನು ಏಕೆ ನೀಡಲಾಗಿದೆ? ಈ ಬಣ್ಣದ ಅರ್ಥವೇನು? ನಮಗೆನಾದರೂ ಅಪಾಯವಿದೆಯೋ ಅಥವಾ ಲಾಭವಿದೆಯೋ ಇಲ್ಲಿ ಮಾಹಿತಿ ನೀಡಲಾಗಿದೆ.
ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ನೀಲಿ ಪಟ್ಟಿ ಎಂದರೆ ಔಷಧಿ ಹೊಂದಿರುವ ಟೂತ್‌ಪೇಸ್ಟ್, ಹಸಿರು ಪಟ್ಟಿ ಎಂದರೆ ಸಂಪೂರ್ಣವಾಗಿ ನೈಸರ್ಗಿಕ, ಕೆಂಪು ಪಟ್ಟಿ ಎಂದರೆ ನೈಸರ್ಗಿಕ ಮತ್ತು ರಾಸಾಯನಿಕಗಳ ಮಿಶ್ರಣ, ಕಪ್ಪು ಪಟ್ಟಿ ಎಂದರೆ ಸಂಪೂರ್ಣ ರಾಸಾಯನಿಕ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗುತ್ತದೆ. ಆದರೆ ಇದು ತಪ್ಪು ಮಾಹಿತಿಯಾಗಿದೆ.
ಜಗತ್ತಿನಲ್ಲಿ ಎಲ್ಲವೂ ತಾಂತ್ರಿಕವಾಗಿ ರಾಸಾಯನಿಕವಾಗಿದೆ. ಎಲ್ಲಾ ನೈಸರ್ಗಿಕ ವಸ್ತುಗಳು ಸಹ ಒಂದು ರೀತಿಯ ರಾಸಾಯನಿಕಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ರಾಸಾಯನಿಕ ಅಥವಾ ರಾಸಾಯನಿಕ ಮುಕ್ತ ಉತ್ಪನ್ನದ ಪ್ರಶ್ನೆಯೇ ಇಲ್ಲ ಎಂದು ಹೇಳಲಾಗುತ್ತದೆ. ಅಸಲಿಗೆ ಟೂತ್‌ಪೇಸ್ಟ್‌ನಲ್ಲಿರುವ ಈ ವರ್ಣರಂಜಿತ ಪಟ್ಟಿಗಳಿಗೂ ಅದರಲ್ಲಿರುವ ಅಂಶಗಳಿಗೂ ಯಾವುದೇ ಸಂಬಂಧವಿಲ್ಲ.
ಟೂತ್‌ಪೇಸ್ಟ್ ಟ್ಯೂಬ್‌ಗಳನ್ನು ತಯಾರಿಸುವ ವಿಧಾನಕ್ಕೆ ಈ ಬಣ್ಣದ ಸಂಕೇತಗಳನ್ನು ಬಳಸಲಾಗುತ್ತದೆ. ಈ ಬಣ್ಣವು ಟ್ಯೂಬ್ ತಯಾರಿಸುವ ಯಂತ್ರಗಳಲ್ಲಿ ಅಳವಡಿಸಲಾಗಿರುವ ಬೆಳಕಿನ ಸಂವೇದಕಗಳಿಗೆ ಯಾವ ರೀತಿಯ ಮತ್ತು ಗಾತ್ರದ ಟ್ಯೂಬ್ ಅನ್ನು ತಯಾರಿಸಬೇಕೆಂದು ಸೂಚಿಸುತ್ತದೆ. ಬೆಳಕಿನ ಸಂವೇದಕಗಳು ಮಾತ್ರ ಇದನ್ನು ಅರ್ಥಮಾಡಿಕೊಳ್ಳುತ್ತದೆ.