ಸಹೋದರಿ ರಾಖಿ ಕಟ್ಟಿದಾಗ ಗಿಫ್ಟ್​ ಆಗಿ ಹಣ ಕೊಡುವುದೇಕೆ? ಈ ಆಚರಣೆ ಹಿಂದಿರುವ ಉದ್ದೇಶ ಹೀಗಿದೆ….

Rakhi Money Gift
Published on

ರಾಖಿ ಹಬ್ಬ ಜಾತಿ ಮತ್ತು ಧರ್ಮವನ್ನು ಮೀರಿ ಆಚರಿಸುವ ಹಬ್ಬಗಳಲ್ಲಿ ಒಂದಾಗಿದೆ. ಈ ರಾಖಿ ಹಬ್ಬ ಸಹೋದರ ಹಾಗೂ ಸಹೋದರಿಯರ ನಡುವಿನ ಪ್ರೀತಿಯ ಸಂಕೇತವಾಗಿದ್ದು, ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಈ ರಾಖಿ ಹಬ್ಬ ಶುರುವಾಗಿದ್ದು ಪುರಾಣಗಳಿಂದ. ಇದನ್ನು ರಕ್ಷಾಬಂಧನ ಎನ್ನುತ್ತಾರೆ. ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಈ ಹಬ್ಬವನ್ನು ಆಚರಿಸುತ್ತಾರೆ. ಸಹೋದರರ ಯೋಗಕ್ಷೇಮ ಮತ್ತು ರಕ್ಷಣೆಗಾಗಿ ಸಹೋದರಿಯರು ಕಟ್ಟುವ ರಕ್ಷಾ ಬಂಧನವಾಗಿದೆ. ಈ ರಕ್ಷಾ ಬಂಧನದಂದು ಒಡಹುಟ್ಟಿದವರು ರಾಖಿ ಕಟ್ಟಿದರೆ, ಅವರಿಗೆ ಪ್ರತಿಯಾಗಿ ಉಡುಗೊರೆಗಳನ್ನು ಏಕೆ ನೀಡಬೇಕು? ಹಣ ಕೊಡುವ ಈ ಪದ್ಧತಿ ಏಕೆ ಬಂತು? ಎಂಬುದರ ಬಗ್ಗೆ ನಾವೀಗ ತಿಳಿಯೋಣ.

ರಾಖಿ ಹಬ್ಬ ಒಂದು ಮಂಗಳಕರ ಹಬ್ಬ. ಈ ವರ್ಷ ಹಬ್ಬವನ್ನು ಸೋಮವಾರ (ಆ.19) ಆಚರಿಸಲಾಗುತ್ತಿದೆ. ಈ ಹಬ್ಬದಂದು ರಾಖಿ ಕಟ್ಟುವುದರಿಂದ ತಮ್ಮ ಸಹೋದರರಿಗೆ ಸಮೃದ್ಧಿ ತರುವುದಲ್ಲದೆ, ಕಷ್ಟದ ಸಮಯದಲ್ಲಿ ಅವರಿಗೆ ಸಹಾಯ ಮಾಡುತ್ತದೆ ಎಂದು ಹೆಣ್ಣು ಮಕ್ಕಳು ನಂಬಿದ್ದಾರೆ. ಹೀಗಾಗಿ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟಿದ ನಂತರ ಸಹೋದರರೂ ಸಹೋದರಿಯರಿಗೆ ಉಡುಗೊರೆ ನೀಡುತ್ತಾರೆ. ಉಡುಗೊರೆಗಳ ಜೊತೆಗೆ ರಕ್ಷಣೆಯ ಪ್ರತಿಜ್ಞೆಯನ್ನು ಸಹ ಮಾಡಲಾಗುತ್ತದೆ. ಆದರೆ ವಾಸ್ತವವಾಗಿ ಈ ಪದ್ಧತಿ ಪ್ರಾಚೀನ ಕಾಲದಿಂದಲೂ ಮುಂದುವರಿದಿದೆ. ಯಾಕೆಂದರೆ, ಒಂದು ಕಾಲದಲ್ಲಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ಹೆಣ್ಣು ಮಗುವಿಗೆ ಬೇಗ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸುತ್ತಿದ್ದರು.

ಆಗ ಮದುವೆಯಾಗಿ ತವರು ಮನೆ ಬಿಟ್ಟು ಹೋಗುತ್ತಿದ್ದ ಹೆಣ್ಣುಮಕ್ಕಳು ಸಹೋದರರಿಗಾಗಿ ರಕ್ಷಾಬಂಧನದ ದಿನ ಮನೆಗೆ ಬರುತ್ತಿದ್ದರು. ರಾಖಿ ಕಟ್ಟಿದ ಸಹೋದರಿಯರಿಗೆ ಹಣವನ್ನು ಉಡುಗೊರೆಯಾಗಿ ನೀಡಿ ಅವರ ಕಷ್ಟದಲ್ಲಿ ಸಹೋದರರು ಆರ್ಥಿಕವಾಗಿ ಬೆಂಬಲಿಸುತ್ತಿದ್ದರು. ಮೇಲಾಗಿ ತಮ್ಮ ಜೀವಮಾನವಿಡೀ ಯಾವುದೇ ಪರಿಸ್ಥಿತಿಯಲ್ಲಿ ರಕ್ಷಣೆ ಮತ್ತು ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡುತ್ತಿದ್ದರು. ಅಂದಿನಿಂದ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟಿದಾಗ ಉಡುಗೊರೆ ಕೊಡುವುದು ಒಂದು ಸಂಪ್ರದಾಯವಾಗಿದೆ.

ಆದರೆ, ಇಂದಿನ ದಿನಗಳಲ್ಲಿ ರಾಖಿಯ ದಿನದಂದೇ ಅನೇಕರು ಹಣ ಖರ್ಚು ಮಾಡುತ್ತಾರೆ. ರಾಖಿ ಹಬ್ಬವನ್ನು ಮುಖ್ಯವಾಗಿ ಹಣಕ್ಕಾಗಿ ಆಚರಿಸಲಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ರಾಖಿ ಹಬ್ಬ ಹಣದ ನಿರೀಕ್ಷೆಯ ವಾಣಿಜ್ಯ ಹಬ್ಬವಾಗಿ ಬದಲಾಗಿದೆ. ರಾಖಿ ಕಟ್ಟಿದರೆ ಏನಾದರೂ ಉಡುಗೊರೆ ಸಿಗುತ್ತದೆ ಎಂದು ಬಹುತೇಕರು ಭಾವಿಸಿದ್ದಾರೆ. ಆದರೆ, ವಾಸ್ತವವಾಗಿ ಇದು ಹೆಣ್ಣುಮಕ್ಕಳಿಗೆ ಉಡುಗೊರೆ ರೂಪದಲ್ಲಿ ಕಾಳಜಿ ವಹಿಸಲು ಮುಂದುವರಿಸುತ್ತಿರುವ ಅಭ್ಯಾಸ ಎಂಬುದು ಯಾರಿಗೂ ತಿಳಿದಿಲ್ಲ. ಎಲ್ಲರೂ ಹಣಕ್ಕಾಗಿಯೇ ಹಬ್ಬವನ್ನು ಆಚರಿಸುತ್ತಿದ್ದಾರೆ. ಆದರೆ, ನಿಜವಾಗಿ ಹೇಳುವುದಾದರೆ ಸಹೋದರರ ಶ್ರೇಯೋಭಿವೃದ್ಧಿಗಾಗಿ, ಅವರು ಕ್ಷೇಮವಾಗಲಿ ಎಂದು ಭಾವಿಸಿ ಹೇಗೆ ರಾಖಿ ಕಟ್ಟುತ್ತಾರೋ, ಸಹೋದರರು ಅವರ ಆರ್ಥಿಕ ಅಗತ್ಯಗಳನ್ನು ತಿಳಿದುಕೊಂಡು ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡುವುದು ಕೂಡ ವಾಡಿಕೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net