

ನೆನಪಿನ ಶಕ್ತಿ ಮತ್ತು ಮುಖದ ಕಾಂತಿ ಹೆಚ್ಚಿಸಲು ಉಪಯುಕ್ತವಾದುದು, 'ಯೋಗಮುದ್ರಾಸನ'. ಇದೊಂದು ವಿಶ್ರಾಂತಿ ಪಡೆಯುವ ವಿಧಾನವಾಗಿದ್ದು, ಸರಳ ಆಸನವಾಗಿದೆ.
ಪ್ರಯೋಜನಗಳು: ಈ ಆಸನ ಮಾಡುವುದರಿಂದ ಶಿರಸ್ಸಿಗೆ ರಕ್ತಸಂಚಲನ ಹೆಚ್ಚಿ, ನರಮಂಡಲ ಸಚೇತನಗೊಳ್ಳುತ್ತದೆ. ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಮುಖದ ಕಾಂತಿ ಹೆಚ್ಚುತ್ತದೆ. ಮಲಬದ್ಧತೆ ಮತ್ತು ಹೊಟ್ಟೆಯ ಗ್ಯಾಸ್, ಗ್ಯಾಸ್ಟ್ರಿಕ್ ಸಮಸ್ಯೆಗಳ ನಿಯಂತ್ರಣಕ್ಕೆ ಕೂಡ ಸಹಕಾರಿ. ಯೋಗಮುದ್ರಾಸನವನ್ನು ನಿತ್ಯ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ, ಚಿತ್ತಶುದ್ಧಿಯಾಗುತ್ತದೆ.
ಅಭ್ಯಾಸ ಕ್ರಮ: ಪ್ರಥಮವಾಗಿ, ಕಾರ್ಪೆಟ್ ಮೇಲೆ ವಜ್ರಾಸನದ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಕೈಗಳನ್ನು ಎತ್ತಿ ಶಿಸ್ತುಬದ್ಧವಾಗಿ ಬೆನ್ನಿನ ಹಿಂದಕ್ಕೆ ತಂದು, ಒಂದು ಕೈಯಿಂದ ಇನ್ನೊಂದು ಕೈನ ಮಣಿಕಟ್ಟನ್ನು ಹಿಡಿದುಕೊಳ್ಳಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಒಮ್ಮೆ ಹಿಂದಕ್ಕೆ ಬಾಗಿ, ಉಸಿರನ್ನು ಬಿಡುತ್ತಾ ದೇಹವನ್ನು ಮುಂದಕ್ಕೆ ಬಗ್ಗಿಸಬೇಕು. ಹಣೆಯನ್ನು ನೆಲಕ್ಕೆ ಸ್ಪರ್ಶಿಸಬೇಕು. ಈ ಭಂಗಿಯಲ್ಲಿ ಸ್ವಲ್ಪ ಹೊತ್ತು ಸಮ ಉಸಿರಾಟ ನಡೆಸುತ್ತಿರಬೇಕು. ಆಮೇಲೆ ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಮೇಲಕ್ಕೆ ಬರಬೇಕು. ಕೈಗಳನ್ನು ಬಿಡಿಸಿಕೊಂಡು ಮುಂದಕ್ಕೆ ತರಬೇಕು. ನಂತರ ಕಾಲುಗಳನ್ನು ವಿಸ್ತರಿಸಿ ವಿಶ್ರಾಂತಿ ಪಡೆಯಬೇಕು.
ಒಮ್ಮೆ ಅಭ್ಯಾಸವಾದರೆ ಮತ್ತೆ ಎರಡು-ಮೂರು ಬಾರಿ ಮಾಡಬಹುದು. ಯೋಗಾಭ್ಯಾಸ ಮಾಡಿದ ನಂತರ ಕೊನೆಯಲ್ಲಿ ಶಾಂತಿ ಮಂತ್ರ ಹೇಳಿ ಈ ಆಸನವನ್ನು ಅಭ್ಯಾಸ ಮಾಡುವುದು ಪ್ರತೀತಿ. ತೀರಾ ಸೊಂಟ ನೋವು, ಮಂಡಿ ನೋವು ಇರುವವರು ಹಾಗೂ ಹೃದಯದ ಖಾಯಿಲೆ, ಅಧಿಕ ರಕ್ತದೊತ್ತಡ ಇರುವವರು ಈ ಆಸನವನ್ನು ಮಾಡಬಾರದು.