ಮಾದಕವಸ್ತುಗಳಿಗೆ ಬಲಿಯಾಗದಿರಿ

30HDK 1
ಎಚ್.ಡಿ.ಕೋಟೆ 1: ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಾದಕ ವಸ್ತು ಸೇವನೆಯಿಂದಾಗುವ ದುಷ್ಪರಿಣಾಮಗಳು ಕುರಿತು ಮಾಹಿತಿ ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶ ಕೆ.ಟಿ.ಸತೀಶ್ ಉದ್ಘಾಟಿಸಿದರು. ಪುಟ್ಟರಾಜು, ಕಾತ್ಯಾಯಿನಿ, ಕೃಪಾ ಗಣೇಶ್, ಕೆಂಪರಾಜು, ರಾಜಶೇಖರ್ ಇತರರಿದ್ದರು.
Published on

ಎಚ್.ಡಿ.ಕೋಟೆ: ಮಾದಕವಸ್ತುಗಳು ಸೇವನೆ ಪ್ರಕರಣ ಎಚ್.ಡಿ.ಕೋಟೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ಬೇಸರದ ಸಂಗತಿ ಎಂದು ಸಿವಿಲ್ ನ್ಯಾಯಾಧೀಶ ಕೆ.ಟಿ.ಸತೀಶ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಎಚ್.ಡಿ.ಕೋಟೆ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್ನೆಸ್ಸೆಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಾದಕ ವಸ್ತು ಸೇವನೆಯಿಂದಾಗುವ ದುಷ್ಪರಿಣಾಮ ಕುರಿತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ಡಿ.ಬಿ.ಕುಪ್ಪೆ ಭಾಗದಲ್ಲಿ ಈಚೆಗೆ ಮಾದಕ ವಸ್ತು ಸೇವನೆ ಕುರಿತು ಪ್ರಕರಣ ಸಹ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಆಲ್ಲದೆ, ಮಾದಕ ವಸ್ತು ಸೇವನೆ ಹಾಗೂ ಮಾರಾಟ ಸಂಬಂಧ ಹಲವು ಪ್ರಕರಣಗಳು ತಾಲೂಕಿನಲ್ಲಿದೆ. ಆದ್ದರಿಂದ, ವಿದ್ಯಾರ್ಥಿಗಳು ಮಾದಕ ವಸ್ತುಗಳ ದಾಸರಾಗದಿರಿ. ಈ ಬಗ್ಗೆ ಪ್ರಕರಣ ಕಂಡುಬಂದಲ್ಲಿ ಪ್ರಾಧಿಕಾರದ ಗಮನಕ್ಕೆ ತರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ವಕೀಲರಾದ ಸರಸ್ವತಿ ಮಾತನಾಡಿ, ಇತರರು ಮಾಡಿರುವ ತಪ್ಪುಗಳನ್ನು ಗಮನಿಸಿ ನಾವು ಸರಿ ಮಾರ್ಗದಲ್ಲಿ ನಡೆದುಕೊಂಡು ಹೋಗಬೇಕು. ಪ್ರತಿಯೊಂದು ಮಗುವನ್ನು ಆತನ ಪೋಷಕರು ಅಡ್ಡದಾರಿಯಲ್ಲಿ ನಡೆಯಲು ದೂಡುವುದಿಲ್ಲ. ಮಕ್ಕಳು ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡುತ್ತಾ ಬೆಳೆಯಲಿ ಎಂಬ ಭಾವದಿಂದ ಬೆಳೆಸುತ್ತಾರೆ. ಮಕ್ಕಳು ಬೆಳೆಯುವಾಗ ದುಷ್ಟರ ಸಹವಾಸದಿಂದ ಅಡ್ಡ ದಾರಿ ತುಳಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ, ದುಷ್ಟರ ಸಹವಾಸವನ್ನು ಮಾಡಬಾರದು ಎಂದರು.

ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಮಾದಕವಸ್ತುಗಳ ಬಳಕೆಯ ದುಷ್ಪರಿಣಾಮದ ಕುರಿತು ವಿಡಿಯೋ ಪ್ರದರ್ಶನದ ಅರಿವು ಮೂಡಿಸಲಾಯಿತು. ಪ್ರಾಂಶುಪಾಲ ಅರುಣ್‌ಕುಮಾರ್, ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್, ಪ್ಯಾನಲ್ ವಕೀಲರಾದ ಸರಸ್ವತಿ, ಮಣಿರಾಜ್, ಉಪನ್ಯಾಸಕರಾದ ಪುಟ್ಟರಾಜು, ದೈಹಿಕ ಶಿಕ್ಷಣ ನಿರ್ದೇಶಕ ಪುಟ್ಟರಾಜು, ಕಾತ್ಯಾಯಿನಿ, ಕನ್ನಡ ವಿಭಾಗದ ಮುಖ್ಯಸ್ಥ ಕೃಪಾ ಗಣೇಶ್, ಕೆಂಪರಾಜು, ರಾಜಶೇಖರ್, ದಮ್ಮೂರಪ್ಪ, ಗುರುದತ್ ಕಾಮತ್, ಬೋರಮ್ಮ ಎಚ್.ಅಂಗಡಿ, ಕಾಲೇಜು ಸಿಬ್ಬಂದಿ ಬಾಲಜಿ, ಮಹದೇವಮ್ಮ, ಸುಶ್ಮಿತಾ, ರವಿ, ಸಿದ್ದರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net