

ಬೆಂಗಳೂರು: ಸರ್ಕಾರಿ ವಸತಿ ಶಾಲೆಗಳಿಗೆ ಟೆಂಡರ್ ಆಹ್ವಾನಿಸಿ ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕ ಮಾಡಬಾರದು ಎಂದು ಸರ್ಕಾರಕ್ಕೆ ಆದೇಶಿಸಿರುವ ಹೈಕೋರ್ಟ್, ಸಾಧ್ಯವಾದಷ್ಟೂ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅನುಸರಿಸಬೇಕು ಎಂದು ನಿರ್ದೇಶಿಸಿದೆ.
ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಸರ್ಕಾರದ ವಿವಿಧ ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ಶಿಕ್ಷಕರು ತಮ್ಮ ಹುದ್ದೆ ಕಾಯಂಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.
ವಿದ್ಯಾರ್ಥಿಗಳ ಆಸಕ್ತಿ ಮತ್ತವರ ಶಿಕ್ಷಣಕ್ಕೆ ಸಂಬಂಧಿಸಿದ ಗಂಭೀರ ವಿಚಾರವಾಗಿರುವುದರಿಂದ ಶಿಕ್ಷಕರ ನೇಮಕಾತಿ ಜವಾಬ್ದಾರಿಯನ್ನು ಹೊರಗುತ್ತಿಗೆ ಏಜೆನ್ಸಿಗಳಿಗೆ ನೀಡುವುದು ಮಕ್ಕಳ ದೃಷ್ಟಿಯಿಂದ ಒಳ್ಳೆಯ ಕ್ರಮವಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಸರ್ಕಾರದಿಂದ ಸ್ಥಾಪನೆಯಾಗಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ ಟೆಂಡರ್ ಕರೆದು ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ವಸತಿ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವ ಪದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಶಿಕ್ಷಕರ ನೇಮಕ ಮಾಡಿಕೊಳ್ಳುವ ನೀತಿಯಿಂದ ಕಳೆದ 10-15 ವರ್ಷಗಳಲ್ಲಿ ಹೊರಗುತ್ತಿಗೆ ಏಜೆನ್ಸಿಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ.
ಸೇವಾ ಭದ್ರತೆ ಅಗತ್ಯ: ಶಿಕ್ಷಕರಾದವರು ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಕ್ರಿಯಾತ್ಮಕ ಶಕ್ತಿ, ಜ್ಞಾನದಿಂದ ಮಗುವಿನ ಜೀವನ ರೂಪಿಸುವ ಹಾಗೂ ಅಭಿವೃದ್ಧಿಪಡಿಸುವ ಕಾರ್ಯ ಮಾಡುವ ಶಿಕ್ಷಕರಿಗೆ ಸೇವಾ ಭದ್ರತೆಯ ಅಗತ್ಯವಿರುತ್ತದೆ. ಅವರ ಕೆಲಸ ಅಥವಾ ವೇತನದಲ್ಲಿ ವ್ಯತ್ಯಯ ಮಾಡುವುದು ಸರಿಯಲ್ಲ. ಕ್ರಿಯಾತ್ಮಕತೆ ಹಾಗೂ ಬದಲಾಗುತ್ತಿರುವ ಬೋಧನಾ ಕೌಶಲ್ಯ ಅಳವಡಿಸಿಕೊಳ್ಳಬೇಕಾದರೆ ಶಿಕ್ಷಕರ ಕೆಲಸಕ್ಕೆ ಭದ್ರತೆಯನ್ನು ಒದಗಿಸಬೇಕಾಗುತ್ತದೆ. ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ನೇಮಕಗೊಂಡವರು ತಮ್ಮ ಮಾಸಿಕ ವೇತನದ ಒಂದು ಭಾಗವನ್ನು ಏಜೆನ್ಸಿಗೆ ಪಾವತಿಸಬೇಕಾಗುತ್ತದೆ. ಜತೆಗೆ, ಹೊರಗುತ್ತಿಗೆ ಬೋಧನಾ ಸಿಬ್ಬಂದಿಗೆ ಪಾವತಿಸಬೇಕಾದ ಸಂಬಳದಿಂದ ಮಾಸಿಕ ಸೇವಾ ಶುಲ್ಕ ಕಡಿತಗೊಳಿಸುತ್ತಿರುವುದೂ ಸರಿಯಲ್ಲ. ಆದ್ದರಿಂದ, ಸರ್ಕಾರ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.