ವ್ಯವಹಾರದ ಹಿತಾಸಕ್ತಿಯಿಂದ ನೋಡಬೇಡಿ

Supremecourt 12 Dec 19
Published on

ನವದೆಹಲಿ: ಬ್ಯಾಂಕ್​ಗಳ ಸಾಲ ಮರುಪಾವತಿಗೆ ನೀಡಿರುವ 6 ತಿಂಗಳ ವಿನಾಯಿತಿ (ಮೊರಟೋರಿಯಂ) ಅವಧಿಯಲ್ಲಿ ಬಡ್ಡಿ ಮನ್ನಾ ಮಾಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸವೋನ್ನತ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿತು. ಕೇವಲ ವ್ಯವಹಾರದ ಹಿತಾಸಕ್ತಿಯಿಂದ ಇದನ್ನು ನೋಡಬಾರದು ಎಂದು ಹೇಳಿತು. ಮೊರಟೋರಿಯಂ ಅವಧಿಯಲ್ಲಿ ಬಡ್ಡಿ ಮನ್ನಾ ಕುರಿತು ಕೇಂದ್ರ ತನ್ನ ನಿಲುವನ್ನು ಸೆಪ್ಟೆಂಬರ್ 1ರೊಳಗೆ ಸ್ಪಷ್ಟಪಡಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಿತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಹಿಂದೆ ಅಡಗಿಕೊಂಡು ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು ಎಂದೂ ತಾಕೀತು ಮಾಡಿತು.

ಬಡ್ಡಿ ಮನ್ನಾ ಮಾಡುವುದರಿಂದ ವಾಣಿಜ್ಯೋದ್ಯಮ ಮತ್ತು ಬ್ಯಾಂಕ್​ಗಳಿಗೆ ತುಂಬಾ ತೊಂದರೆಯಾಗುತ್ತದೆ ಎಂಬ ಕೇಂದ್ರದ ಟಿಪ್ಪಣಿ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, ‘ಸರ್ಕಾರ ಇಡೀ ದೇಶವನ್ನು ಲಾಕ್​ಡೌನ್ ಮಾಡಿದ್ದರಿಂದ ಈ ಪರಿಸ್ಥಿತಿ ಉದ್ಭವಿಸಿದೆ’ ಎಂದು ಅಭಿಪ್ರಾಯಪಟ್ಟಿತು. ಇದನ್ನೂ ಓದಿ: 80 ವರ್ಷಗಳಿಂದ ಕೂದಲು ಕತ್ತರಿಸದ ಅಜ್ಜ…ಇದರ ಹಿಂದಿದೆ ಒಂದು ವಿಚಿತ್ರ ಕಾರಣ!

‘ವಿಪತ್ತು ನಿರ್ವಹಣಾ ಕಾನೂನಿನನ್ವಯ ಬಡ್ಡಿ ಮನ್ನಾ ಮಾಡಲು ಸರ್ಕಾರಕ್ಕೆ ಸಾಕಷ್ಟು ಅಧಿಕಾರ ಇದ್ದರೂ ಕೇಂದ್ರ ಇನ್ನೂ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

‘ಎಲ್ಲದಕ್ಕೂ ಒಂದೇ ರೀತಿಯ ಪರಿಹಾರ ಸೂತ್ರ ಅನ್ವಯವಾಗುವುದಿಲ್ಲ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್, ‘ಸರ್ಕಾರ ಕೇವಲ ವಾಣಿಜ್ಯೋದ್ಯಮಿಗಳ ಹಿತದ ಬಗ್ಗೆ ಚಿಂತಿಸಬಾರದು. ಜನತೆಯ ಸಂಕಷ್ಟಗಳ ಬಗ್ಗೆಯೂ ಚಿಂತಿಸಬೇಕು. ವಿಪತ್ತು ನಿರ್ವಹಣಾ ಕಾನೂನು ಹಾಗೂ ಬಡ್ಡಿಯ ಮೇಲೆ ಬಡ್ಡಿ ಹೇರುವಿಕೆ ಅನ್ವಯವಾಗುತ್ತದೆಯೇ ಎಂಬ ಕುರಿತು ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಸೂಚಿಸಿದರು.

ಮಾರ್ಚ್ 27ರಂದು ಆರ್​ಬಿಐ ಹೊರಡಿಸಿದ್ದ ಅಧಿಸೂಚನೆಯ ಕೆಲವು ಭಾಗವನ್ನು ರದ್ದು ಮಾಡಿ ಬಡ್ಡಿ ಮನ್ನಾಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಅರ್ಜಿದಾರ ಕೋರಿಕೆಯಾಗಿದೆ. ಆಗಸ್ಟ್ 31ರಂದು ಅಂತ್ಯಗೊಳ್ಳುವ ಮೊರಟೋರಿಯಂ ಅನ್ನು ವಿಸ್ತರಿಸುವಂತೆ ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ಮನವಿ ಮಾಡಿದರು. ಇಲ್ಲದಿದ್ದರೆ ಅರ್ಜಿದಾರರು ಸೆಪ್ಟೆಂಬರ್ 1ರಂದು ಸುಸ್ತಿದಾರರಾಗುತ್ತಾರೆ ಎಂದರು.

ಈಗ ಪರಿಹಾರ ಕೊಡಿ

ಕರೊನಾ ಸಾಂಕ್ರಾಮಿಕತೆ ಹರಡುವುದನ್ನು ತಡೆಯಲೆಂದು ಇಡೀ ದೇಶವನ್ನು ಲಾಕ್​ಡೌನ್ ಮಾಡಿದ್ದಿರಿ. ಈಗ ಅದಕ್ಕೆ ಸಂಬಂಧಿಸಿ ಪರಿಹಾರ ಒದಗಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.

ನಿಮ್ಮ (ಕೇಂದ್ರ ಸರ್ಕಾರ) ಲಾಕ್​ಡೌನ್​ನಿಂದಾಗಿ ಸಮಸ್ಯೆ ಉದ್ಭವವಾಗಿದೆ. ವಾಣಿಜ್ಯ ಹಿತದ ಬಗ್ಗೆ ಪರಿಶೀಲಿಸಲು ಇದು ಸಕಾಲವಲ್ಲ. ಜನರ ಸಂಕಷ್ಟಗಳನ್ನು ಕೂಡ ಪರಿಗಣಿಸಬೇಕು | ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net