80 ವರ್ಷಗಳಿಂದ ಕೂದಲು ಕತ್ತರಿಸದ ಅಜ್ಜ...ಇದರ ಹಿಂದಿದೆ ಒಂದು ವಿಚಿತ್ರ ಕಾರಣ!

Hair
Published on

ಡಾಂಗ್ ಹೋವಾ (ವಿಯೆಟ್ನಾಂ): ಇವರಿಗೆ 92 ವರ್ಷ. ಇವರ ತಲೆ ಕೂದಲು 5 ಮೀಟರ್​ ಉದ್ದ...!
ನ್ಗುಯೇನ್ ವ್ಯಾನ್ ಚಿಯೆನ್ ಎಂಬ ಈ ವ್ಯಕ್ತಿ ಕಳೆದ 80 ವರ್ಷಗಳಿಂದ ತಮ್ಮ ತಲೆ ಕೂದಲನ್ನು ಕತ್ತರಿಸಿಲ್ಲ. ಟ್ರಿಮ್​ ಮಾಡಿಸಿಲ್ಲ. ಅದೆಲ್ಲ ಬಿಡಿ ಒಂದು ಬಾರಿಯೂ ತೊಳೆದೂ ಇಲ್ಲ ! ಅದಕ್ಕೆ ಕಾರಣವೂ ಇದೆಯಂತೆ.

ನಾನು ನನ್ನ ಕೂದಲನ್ನು ಕತ್ತರಿಸಿದರೆ ಸಾಯುತ್ತೇನೆ ಎಂದೇ ನಂಬಿಕೊಂಡಿದ್ದೇನೆ. ದೇವರು ಕೊಟ್ಟಿದ್ದು ಇದು. ಹಾಗಾಗಿ ಬದಲಾವಣೆ ಮಾಡಲಾಗಲಿ, ಕತ್ತರಿಸಲಾಗಲಿ ಇಷ್ಟವಿಲ್ಲ. ಇಷ್ಟು ವರ್ಷದಲ್ಲಿ ಒಂದಿನವೂ ಬಾಚಣಿಕೆಯನ್ನೂ ತಗುಲಿಸಿಲ್ಲ ಎಂದು ವಿಯೆಟ್ನಾಂನ ಹೋ ಚಿ ಮಿನ್ಹ್ ಸಿಟಿಯಿಂದ 80 ಕಿಮೀ ದೂರದಲ್ಲಿರುವ ಹಳ್ಳಿಯೊಂದರ ನಿವಾಸಿಯಾಗಿರುವ ಚಿಯೆನ್ ತಿಳಿಸಿದ್ದಾರೆ.

ಆದರೆ ನಾನು ನನ್ನ ಕೂದಲಿಗೆ ಅಗತ್ಯ ಆರೈಕೆ ಮಾಡುತ್ತೇನೆ. ಸ್ಕಾರ್ಫ್​ ಕಟ್ಟಿಕೊಳ್ಳುತ್ತೇನೆ. ಸದಾ ಒಣಗಿದಂತೆ, ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನಾನು ಶಾಲೆಯಲ್ಲಿ ಇದ್ದಾಗ ನನ್ನ ಕೂದಲು ತುಂಬ ದಟ್ಟವಾಗಿ, ಚೆನ್ನಾಗಿತ್ತು. ನಾನಾಗ ಅದನ್ನು ಬಾಚುತ್ತಿದ್ದೆ. ಆದರೆ ಒಂದು ದಿನ ನನಗೆ ದೈವೀ ಕರೆ ಬಂತು. ರಾತ್ರೋರಾತ್ರಿ ನನ್ನ ಕೂದಲು ಜಟೆಯಂತೆ ಪರಿವರ್ತನೆಯಾಯಿತು. ಅಂದಿನಿಂದಲೂ ನಾನು ಕೂದಲನ್ನು ತೊಳೆದಿಲ್ಲ...ಬಾಚಿಲ್ಲ ಎಂದು ಹೇಳಿದರು.
ಚಿಯೆನ್​ ದುವಾ ಎಂಬ ದೈವೀ ಶಕ್ತಿಯನ್ನು ನಂಬುತ್ತಾರೆ. ದುವಾ ಎಂಬುದು ತೆಂಗಿನಕಾಯಿಯಲ್ಲಿರುವ ಒಂದು ದೈವಶಕ್ತಿಯಾಗಿದೆ. ಆದರೆ ಈಗಿನವರು ಇದನ್ನೆಲ್ಲ ನಂಬುವುದಿಲ್ಲ. ಮೂಢನಂಬಿಕೆಯ ಪಟ್ಟಿಗೆ ಸೇರಿಸಿ, ವಿಯೆಟ್ನಾಂನಲ್ಲಿ ನಿಷೇಧಿಸಲಾಗಿದೆ.

ಚಿಯಾನ್​ ಅವರು ಸದ್ಯ 9 ದೈವೀ ಶಕ್ತಿಗಳನ್ನು, ಏಳು ದೇವರನ್ನು ಪೂಜಿಸುತ್ತಾರೆ. ಅವರ ಕೂದಲಿನ ಆರೈಕೆಗೆ ಪುತ್ರ ಲುಮ್ (62) ಕೂಡ ಸಹಾಯ ಮಾಡುತ್ತಾರೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net