ಗರಿಷ್ಠ ತಾಪಮಾನದ ಅವಧಿಯಲ್ಲಿ ಹೊರಗಡೆ ಓಡಾಡಬೇಡಿ

1744713138038
ಕೆ.ಆರ್.ಸಾಗರ ಆಯುಷ್ಮಾನ್ ಆರೋಗ್ಯ ಮಂದಿರ ವ್ಯಾಪ್ತಿಯಲ್ಲಿ ಪಿ.ಬಿ ಫೈಲ್ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಚೇರಿ ವತಿಯಿಂದ ಆಯೋಜಿಸಿದ್ದ ಬಿಸಿಲಿನಿಂದ ಆರೋಗ್ಯ ರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಗಣ್ಯರು ಭಿತ್ತ್ತಿಪತ್ರ ಪ್ರದರ್ಶಿಸಿದರು. ಎಸ್.ಡಿ.ಬೆನ್ನೂರ, ಜಿ.ಮೋಹನ್, ಚೇತನ್‌ಕುಮಾರ್, ಬೆಟ್ಟೇಗೌಡ, ರಾಚಪ್ಪ, ಜಯರಾಮ್ ಇತರರಿದ್ದರು.
Published on

ಕೆ.ಆರ್.ಸಾಗರ: ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ಹಾಗೂ ಬಿಸಿ ಗಾಳಿಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ ತಡೆಯಲು ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹೇಳಿದರು.

ಕೆ.ಆರ್.ಸಾಗರ ಆಯುಷ್ಮಾನ್ ಆರೋಗ್ಯ ಮಂದಿರ ವ್ಯಾಪ್ತಿಯಲ್ಲಿ ಪಿ.ಬಿ.ಫೈಲ್ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಚೇರಿ ವತಿಯಿಂದ ಆಯೋಜಿಸಿದ್ದ ಬಿಸಿಲಿನಿಂದ ಆರೋಗ್ಯ ರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಅತಿಯಾದ ಬಿಸಿಲು ಮಕ್ಕಳಿಂದ ಹಿರಿಯರವರೆಗೆ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ಸಾರ್ವಜನಿಕರು ವಿಶೇಷವಾಗಿ ಗರಿಷ್ಠ ತಾಪಮಾನದ ಅವಧಿಯಲ್ಲಿ ಅಂದರೆ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸುವುದು ಹಾಗೂ ಈ ಅವಧಿಯಲ್ಲಿ ಮಹಿಳೆಯರು ಅಡುಗೆ ಮಾಡಬೇಡಿ. ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯುವುದು, ಹಗುರವಾದ ತಿಳಿ ಬಣ್ಣದ ಸಡಿಲವಾದ ಬಟ್ಟೆ ಧರಿಸುವುದು, ಆಕಸ್ಮಿಕವಾಗಿ ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕ, ಛತ್ರಿ, ಟೋಪಿ ಹಾಗೂ ಚಪ್ಪಲಿ ಧರಿಸುವುದು. ಪ್ರಯಾಣ ಮಾಡುವಾಗ ನೀರನ್ನು ಜತೆಯಲ್ಲೇ ಒಯ್ಯುವುದು, ಸಾಧ್ಯವಾದಷ್ಟು ಬಿಸಿ ಆಹಾರ ಸೇವಿಸುವುದು, ತಾಜಾ ಹಣ್ಣಿನ ರಸ, ಸೌತೆ ಕಾಯಿಯಂತಹ ತರಕಾರಿ ಸೇವಿಸಿರಿ, ನಿಂಬೆ ನೀರು, ಮಜ್ಜಿಗೆ, ಎಳನೀರು ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಒಆರ್‌ಎಸ್ ಬಳಸಿ ಆರೋಗ್ಯವಾಗಿರಿ ಎಂದು ಸಲಹೆ ನೀಡಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಮಾತನಾಡಿ, ಬಿಸಿಲಿನ ವೇಳೆಯಲ್ಲಿ ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ ತಕ್ಷಣ ವೈದ್ಯರನ್ನು ಕಾಣಬೇಕು. ಬಿಸಿಲಲ್ಲಿ ಹೆಚ್ಚು ಓಡಾಡಿದರೆ ತುರಿಕೆ, ಚರ್ಮ ಒಣಗುವಿಕೆ, ಕೆಂಪಾಗುವಿಕೆ, ಅಲರ್ಜಿ, ತೀವ್ರ ಜ್ವರ ಸೇರಿದಂತೆ ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಬಹುತೇಕ ಕೆಲಸಗಳನ್ನು ಬೆಳಗ್ಗೆ ಹಾಗೂ ಸಂಜೆ ಮೇಲೆ ಮಾಡಿಕೊಳ್ಳಿ. ಟೀ-ಕಾಫಿ ಕಡಿಮೆ ಮಾಡಿ ಎಂದು ಕಿವಿಮಾತು ಹೇಳಿದರು.

ಸಮುದಾಯ ಆರೋಗ್ಯ ಅಧಿಕಾರಿ ಚೇತನಕುಮಾರ್, ಪ್ರಮುಖರಾದ ಬೆಟ್ಟೇಗೌಡ, ರಾಚಪ್ಪ, ಆನಂದ, ಜಯರಾಮ್ ಹಾಗೂ ಆಶಾ ಕಾರ್ಯಕರ್ತೆಯರಾದ ಜಯಲಕ್ಷ್ಮೀ, ಮಾಲಿನಿ, ರೂಪಾ, ಸವಿತಾ ಹಾಗೂ ತಾಯಂದಿರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net