ವೈಯಕ್ತಿಕ ಹಿತಾಸಕ್ತಿಗೆ ಪಕ್ಷಕ್ಕೆ ದ್ರೋಹ ಎಸಗದಿರಿ

klr meeting
ಕೋಲಾರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ವಿವಿಧ ಘಟಕಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಎಂ.ನಾರಾಯಣಸ್ವಾಮಿ ಮಾತನಾಡಿದರು.
Published on

ಕೋಲಾರ: ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ಕಟ್ಟಿರುವ ಪಕ್ಷವು ದೇವಾಲಯವಿದ್ದಂತೆ. ಅದು ತಾಯಿಗೆ ಸಮನಾದದ್ದು. ದ್ರೋಹಬಗೆಯಬಾರದು. ವೈಯಕ್ತಿಕ ಕಾರಣ ಇದ್ದರೆ ಕೂತು ಬಗೆಹರಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಎಂ.ನಾರಾಯಣಸ್ವಾಮಿ ಕೈ ಕಾರ್ಯಕರ್ತರಿಗೆ ಸೂಚಿಸಿದರು.
ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪಕ್ಷವು ಬಲಿಷ್ಠವಾಗಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದೀರಿ. 6 ವಿಧಾನ ಸಭೆಯ ನಗರಸಭೆ, ಪುರಸಭೆಗಳು ನಮ್ಮ ಅಽಕಾರದಲ್ಲಿದೆ. ಹೀಗಿರುವಾಗಿ ರಂಪಾಟ ಬೇಕಿತ್ತೆ ಎಂದು ಪ್ರಶ್ನಿಸಿದರು.
ಪಕ್ಷದಲ್ಲಿ ಪ್ರಮುಖವಾಗಿ ಐದು ಘಟಕಗಳು ಇದ್ದು, ಸಮರ್ಪಕವಾಗಿ ಪದಾಧಿಕಾರಿಗಳ ಆಯ್ಕೆಯಾಗಿಲ್ಲ, ಇದು ಪಕ್ಷದ ಸಂಘಟನೆಯ ಮೇಲೂ ಪರಿಣಾಮ ಬೀರುತ್ತದೆ. ಆಯಾ ವ್ಯಾಪ್ತಿಯ ಶಾಸಕರೊಂದಿಗೆ ಚರ್ಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಬೇಕು. ಪಕ್ಷಕ್ಕಾಗಿ ದುಡಿಯುತ್ತಿರುವ ಪ್ರಾಮಾಣಿಕ, ನಿಷ್ಠಾವಂತವರನ್ನು ಗುರುತಿಸಿ ಸ್ಥಾನಮಾನ ನೀಡಬೇಕು ಎಂದು ನಿರ್ದೇಶಿಸಿದರು.
ಕಾರ್ಯಕರ್ತರು, ಮುಖಂಡರ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ನನಗೆ ಪ್ರತ್ಯೇಕವಾಗಿ ತಿಳಿಸಿದರೆ ಬಗೆಹರಿಸಲು ಪ್ರಯತ್ನಿಸುತ್ತೇನೆ. ಗಂಭೀರ ವಿಷಯಗಳಾದರೆ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದು ಬಗೆಹರಿಸುತ್ತೇವೆ. ಯಾವುದೇ ಕಾರಣಕ್ಕೂ ಬಹಿರಂಗ ಸ್ಥಳಗಳಲ್ಲಿ ಪ್ರಸ್ತಾಪಿಸುವ ಮೂಲಕ ಗೊಂದಲಕ್ಕೆ ಎಡೆ ಮಾಡಿ ಕೊಡಬೇಡಿ ಎಂದರು.

ಅವಕಾಶ ಸಿಗುವತನಕ ತಾಳ್ಮೆಯಿಂದಿರಿ
ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ಸಭೆಯಲ್ಲಿ ಉಂಟಾದ ಗೊಂದಲವು ರಾಜ್ಯಮಟ್ಟದಲ್ಲಿ ಮಾತನಾಡಿಕೊಳ್ಳುವಂತಾಯಿತು, ಸಣ್ಣಪುಟ್ಟ ವಿಷಯಗಳನ್ನು ಬಹಿರಂಗ ಸಭೆಗಳಲ್ಲಿ ಪ್ರಸ್ತಾಪ ಮಾಡದೆ ಮುಖಂಡರ ಬಳಿ ಮಾತನಾಡಿ, ಬಗೆಹರಿಸಿ ಕೊಳ್ಳಬೇಕು ಎಂದ ಅವರು, ಪಕ್ಷಕ್ಕಾಗಿ ದುಡಿದವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗಿದೆ. ಜಿಲ್ಲೆಯ ಶಾಸಕರಿಗೂ ಅವಕಾಶಗಳು ಸಿಕ್ಕಿದ್ದು, ಕಾರ್ಯಕರ್ತರನ್ನು ಗುರುತಿಸಿ ಜವಾಬ್ದಾರಿ ನೀಡಲಾಗುತ್ತದೆ. ಅಲ್ಲಿಯತನಕ ತಾಳ್ಮೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರ ಕಳೆದ 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಯಾವುದೇ ಹಗರಣಗಳಲ್ಲಿ ಭಾಗಿಯಾಗಿರುವ ಉದಾಹರಣೆ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದನ್ನು ಸಹಿಸಿಕೊಳ್ಳಲಾಗದ ಬಿಜೆಪಿ ಮತ್ತು ಜೆಡಿಎಸ್ ಕುತಂತ್ರದಿಂದ ಮುಡಾ ಪ್ರಕರಣ ಹುಟ್ಟು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಗೌತಮ್, ರಾಜ್ಯಸಂಚಾಲಕಿ ವಸಂತ ಕವಿತಾ, ಜಿಲ್ಲಾಧ್ಯಕ್ಷ ಲಕ್ಷ್ಮೀ ನಾರಾಯಣ. ಜಿಲ್ಲಾ ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಗ್ಯಾರಂಟಿ ಅನುಷ್ಠನಾ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಬ್ಲಾಕ್ ಅಧ್ಯಕ್ಷರಾದ ಪ್ರಸಾದ್ ಬಾಬು, ಉದಯಶಂಕರ್, ಎಸ್‌ಸಿ ಘಟಕ ಅಧ್ಯಕ್ಷ ಜಯದೇವ, ಕುಡಾ ಅಧ್ಯಕ್ಷ ಮಹಮದ್ ಹನೀ-ï, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಕಾಂಗ್ರೆಸ್ ಜಿಲ್ಲಾ ಮಹಿಳಾ ಅಧ್ಯಕ್ಷೆ ರತ್ನಮ್ಮ ಹಾಜರಿದ್ದರು.

ಕೋಟ್..
ಬಿಜೆಪಿಯವರು ಹಿಂದೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಷಡ್ಯಂತರ ನಡೆಸಿದರು. ಆದರೆ ಅದು ವಿಫಲವಾಗಿತು. ಈಗ ಸಿದ್ದರಾಮಯ್ಯ ಅವರ ಮೇಲೆ ಪ್ರಯೋಗಿಸುತ್ತಿದ್ದಾರೆ.- ಕೆ.ವೈ.ನಂಜೇಗೌಡ, ಶಾಸಕ, ಮಾಲೂರು

ಕೋಟ್..
ಕಾಂಗ್ರೆಸ್ ಅಧಿಕಾರದಲ್ಲಿ ಇರಲಿ ಬಿಡಲಿ ರಾಷ್ಟದಲ್ಲಿಯೇ ಒಂದು ಜವಾಬ್ದಾರಿಯುತ ಪಕ್ಷವಾಗಿದೆ. ಪಕ್ಷದ ಬೆಳವಣಿಗೆಯನ್ನು ಸಹಿಸದೆ ವಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಪಾಧನೆ ಮಾಡಿ ಮಸಿ ಬಳಿಯುವ ಕುತಂತ್ರ ಮಾಡುತ್ತಿವೆ.- ವಿ.ಆರ್.ಸುದರ್ಶನ್
ವಿಧಾನಪರಿಷತ್ ಮಾಜಿ ಸಭಾಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net