

ಬೀರೂರು: ಶರಣರು ಮತ್ತು ಶಿವಾಚಾರ್ಯರ ವಿಚಾರಧಾರೆಗಳು ಒಂದೇ ಆಗಿದ್ದು, ವೀರಶೈವ ಲಿಂಗಾಯತ ಧರ್ಮದ ವಿಘಟನೆಗೆ ಆಸ್ಪದ ನೀಡದೆ ಮೂಲ ಧ್ಯೇಯದ ಸಾಧನೆಗೆ ಒಟ್ಟಾಗಿ ಶ್ರಮಿಸಬೇಕಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗರುಗಳು ತಿಳಿಸಿದರು.
ಪಟ್ಟಣದ ಡಿ.ವಿ.ಹಾಲಪ್ಪ ಬಡಾವಣೆಯಲ್ಲಿ ಸೋಮವಾರ ಪುರಾತನ ಮರುಳಸಿದ್ದೇಶ್ವರ ಗದ್ದುಗೆ ನೂತನ ದೇವಾಲಯ ಪ್ರಾರಂಭೋತ್ಸವ ಕಲಶಾರೋಹಣ ಧಾರ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
12ನೇ ಶತಮಾನದ ಬಸವಾದಿ ಶರಣರ ವಿಚಾರಧಾರೆಗಳು ವಚನ ಸಾಹಿತ್ಯದ ಮೂಲಕ ಜಾಗೃತ ಮತ್ತು ಸಮ ಸಮಾಜ ನಿರ್ಮಾಣಕ್ಕೆ ಪ್ರೇರಕವಾಗಿರುವಂತೆಯೇ ಆಚಾರ್ಯರ ಅಧ್ಯಾತ್ಮ ತಳಹದಿಯ ತಿರುಳು ಇದೇ ಆಗಿದೆ. ತಪ್ಪು ತಿಳಿವಳಿಕೆ ಬೇಡ ಎಂದರು.
ಪಟ್ಟಣ ಧಾರ್ಮಿಕವಾಗಿ ಪೀಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ಸ್ಥಳೀಯವಾಗಿ ಭಕ್ತರ ಅನುಕೂಲಕ್ಕಾಗಿ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡಲು ಶ್ರೀಮಠದ ಜಾಗ ಉಪಯುಕ್ತಗೊಳಿಸುವಲ್ಲಿ ಪ್ರಸ್ತುತ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯರು, ಶಿವಾನಂದಾಶ್ರಮ ಟ್ರಸ್ಟ್ ಹಾಗೂ ರೇಣುಕ ಸಾಂಸ್ಕೃತಿಕ ಸಂಘ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿ ಸೇವಾ ಕಾರ್ಯಗಳಲ್ಲಿ ಕೈಜೋಡಿಸುತ್ತಿರುವುದು ಸಮಾಧಾನ ತಂದಿದೆ ಎಂದರು. ಒಮ್ಮೆ ರೇಣುಕಾಚಾರ್ಯರ ಯುಗಮಾನೋತ್ಸವವನ್ನು ಪಟ್ಟಣದಲ್ಲಿ ನೆರವೇರಿಸಬೇಕೆಂಬ ಆಶಯವಿದೆ ಎಂದರು.
ಪಟ್ಟಣದ ರಂಭಾಪುರಿ ಖಾಸಾ ಪೀಠದ ಶ್ರೀ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಭಕ್ತರ ಸಹಕಾರದಿಂದ ಮರುಳ ಸಿದ್ದೇಶ್ವರಸ್ವಾಮಿ ಗದ್ದುಗೆ ದೇವಾಲಯ ನಿರ್ಮಾಣ ಹಾಗೂ ಪೂಜಾ ಕಳಸಾರೋಹಣ ಸುಸೂತ್ರವಾಗಿ ಜರುಗಿದೆ. ಜಗದ್ಗುರುಗಳ ಆಶಯದಂತೆ ಸಮುದಾಯಭವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ಧಾರ್ಮಿಕ, ಸಾಮಾಜಿಕ ಸೇವಾಕಾರ್ಯಗಳಿಗೆ ದೊರೆಯಲಿದೆ ಎಂದು ತಿಳಿಸಿದರು.
ದೇವಾಲಯ ನಿರ್ಮಾಣ ಹಾಗೂ ದೇವತಾ ಕಾರ್ಯಕ್ಕೆ ಶ್ರಮಿಸಿದವರನ್ನು ಗೌರವಿಸಲಾಯಿತು. ಅಂಬರದೇವರ ಮಠದ ಉಜನೇಶ್ವರ ಶಿವಾಚಾರ್ಯ, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಲೋಕೇಶ್, ತರೀಕೆರೆ ತಾಲೂಕು ಅಧ್ಯಕ್ಷ ಗಿರೀಶ್, ರೇಣುಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ಆರ್.ಮರುಳಸಿದ್ದಾರಾಧ್ಯ, ವಿಶ್ವಾರಾಧ್ಯ, ಜ್ಞಾನೇಂದ್ರಬಾಬು, ಕುಮಾರ ಶಾಸೀ, ರಾಕೇಶ್ ಹಾಗೂ ಟ್ರಸ್ಟ್ ಸದಸ್ಯರು, ಅಕ್ಕಮಹಾದೇವಿ ಮಹಿಳಾ ಸಮಾಜ ಹಾಗೂ ವಿವಿಧ ಸೇವಾ ಘಟಕದ ಸದಸ್ಯರು ಇದ್ದರು.