ನಿಮ್ಮ ಮನೆಯಲ್ಲಿ ಹಿರಿಯರು ಹೀಗೆಲ್ಲ ನಡೆದುಕೊಳ್ಳುತ್ತಾರಾ? ಅದಕ್ಕೆ ಕಾರಣ ಇದು...

senior-citizensbig25may2018
Published on

ಡಾ. ಆನಂದ ಪಾಂಡುರಂಗಿ

ಒಮ್ಮೆ ನನ್ನ ಬಳಿ ಒಬ್ಬ ವ್ಯಕ್ತಿ ಬಂದರು. ಮಧ್ಯವಯಸ್ಕ. ಅವರ ತಂದೆಯ ಕುರಿತಾಗಿ ಸಮಸ್ಯೆ ಹಾಗೂ ಸಂದೇಹ ಹೊತ್ತು ಬಂದಿದ್ದರು. ಅವರು ಹೇಳುತ್ತ ಹೋದರು. ‘ನಾನೊಬ್ಬ ಖಾಸಗಿ ಉದ್ಯೋಗಿ. ನಮ್ಮ ತಂದೆಯವರು ತಮ್ಮ ಜೀವನದುದ್ದಕ್ಕೂ ಪ್ರಾಮಾಣಿಕ ಸಾತ್ವಿಕ ಸರಳ ವ್ಯಕ್ತಿ. ಸಣ್ಣ ಪುಟ್ಟ ಉದ್ಯೋಗವನ್ನು ಮಾಡಿ ನಮಗೆ ಒಳ್ಳೆಯ ಮೌಲ್ಯವನ್ನು ನೀಡಿದ್ದಾರೆ. ಅವರ ಪ್ರಾಮಾಣಿಕತೆಗೆ ನಮ್ಮ ಊರೇ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತದೆ. ಈಗ ನಾನು ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು ಊರನ್ನೇ ಬಿಡಬೇಕಾಗಿ ಬಂದಿದೆ. ತಮ್ಮ ಸಲಹೆ ಮಾರ್ಗದರ್ಶನಕ್ಕಾಗಿ ಬಂದಿದ್ದೇನೆ’ ಎಂದು ಹೇಳಿದ ಆತ.

‘ನನ್ನ ತಂದೆಯವರಿಗೀಗ 65 ವಯಸ್ಸು. ಕಳೆದ 4-6 ತಿಂಗಳುಗಳಿಂದ ಅವರ ವರ್ತನೆಯಲ್ಲಿ ಏನೋ ಬದಲಾವಣೆ. ಅಕ್ಕ ಪಕ್ಕದವರಿಗೆಲ್ಲ ಅವರ ಈ ಅಸಹಜ ವರ್ತನೆ ಮತ್ತು ತೀಕ್ಷ್ಣ ಪ್ರತಿಕ್ರಿಯೆ ಕಾಣಿಸುತ್ತದೆ. ಯಾರ ಜೊತೆಗೆ ಯಾವ ರೀತಿ ವರ್ತಿಸಬೇಕು ಎಂದೇ ಅವರಿಗೆ ತಿಳಿಯುತ್ತಿಲ್ಲ. ಹೆಣ್ಣುಮಕ್ಕಳೊಂದಿಗೆ ಅನುಚಿತ ವರ್ತನೆ ನೋಡಿ ಒಂಥರಾ ಮುಜುಗರ ಪಡುವಂತಾಗಿದೆ. ಎಂದೂ ಇವರು ರೇಗಿದವರಲ್ಲ, ಈಗ ಚಿಕ್ಕ ಚಿಕ್ಕ ವಿಷಯಗಳಿಗೆ ಸಿಟ್ಟುಮಾಡಿಕೊಳ್ಳುತ್ತಾರೆ. ಸಿಟ್ಟಿನಲ್ಲಿ ವಸ್ತುಗಳನ್ನು ಎಸೆಯುತ್ತಾರೆ. ಒಮ್ಮೊಮ್ಮೆ ತಾವು ಮಾಡಿದ್ದೇ ಅವರಿಗೆ ನೆನಪು ಉಳಿಯುವುದಿಲ್ಲ. ತಮಗೆ ಇಷ್ಟ ಬಂದಿದ್ದನ್ನು ಯಾರಿಗೂ ಹೇಳದೇ ಕೇಳದೇ ತೆಗೆದುಕೊಂಡುಬಿಡುತ್ತಾರೆ. ಪಕ್ಕದ ಮನೆಯವರು, ಊರ ಜನರು, ನಿಮ್ಮ ತಂದೆಯವರ ಬಗ್ಗೆ ಅಪಾರ ಗೌರವವಿದೆ. ಆದರೆ ಇತ್ತೀಚೆಗೆ ಅನವಶ್ಯಕವಾಗಿ ಮನೆಗೆ ಬರುವದು, ಅನವಶ್ಯಕ ವಿಷಯಗಳ ಬಗ್ಗೆ ಮಾತನಾಡುವುದನ್ನು ನೋಡಿದರೆ ಇವರಿಗೆ ಮನೋವೈದ್ಯರ ಸಲಹೆಬೇಕು ಅಂತ ಅನಿಸುತ್ತದೆ. ತಪ್ಪು ಭಾವಿಸಬೇಡಿ. ದಯವಿಟ್ಟು ಬೇಗನೇ ತೋರಿಸಿ ಎಂದು ಹೇಳುತ್ತಿದ್ದಾರೆ. ಅವರು ಬೇಕು ಅಂತ ಮಾಡುತ್ತಿದ್ದಾರೋ ಅಥವಾ ಯಾವುದಾದರೂ ರೋಗ ಈ ರೀತಿ ಮಾಡಿಸುತ್ತಿದೆಯೋ ಒಂದೂ ಗೊತ್ತಾಗುತ್ತಿಲ್ಲ’ ಎಂದು ವಿವರಿಸಿದರು.

ಅವರ ಸಮಸ್ಯೆಯನ್ನು ಕೇಳಿ ತಪಾಸಣೆ ಮಾಡಿ ನೋಡಲಾಯಿತು. ಅದರ ಲಿತಾಂಶದ ಆಧಾರದಲ್ಲಿ ಇದು ಒಂದು ತರಹದ ಡಿಮೆನ್ಸಿಯಾ ಇರಬಹುದು ಎಂದು ಅವರಿಗೆ ತಿಳಿಸಿದೆವು. ಇಂತಹ ಸನ್ನಿವೇಶದಲ್ಲಿ ವರ್ತನೆಯ ಬದಲಾವಣೆಯ ಜೊತೆಗೆ ವಿಚಾರ, ಭಾವನೆಗಳು ಹಾಗೂ ಭಾಷೆಯ ಸಮಸ್ಯೆ ಕೂಡಾ ಸಮಯ ಕಳೆದಂತೆ ಕಂಡುಬರುತ್ತವೆ. ಸಾಮಾನ್ಯವಾಗಿ ಲಕ್ಷಕ್ಕೆ 15 ರಿಂದ 20 ಜನರಲ್ಲಿ ಈ ತರಹದ ಸಮಸ್ಯೆ ಕಂಡುಬರುತ್ತದೆ. ಇದರಲ್ಲಿ ಮಿದುಳಿನ ಮುಂದಿನ (ಫ್ರಂಟಲ್) ಹಾಗೂ ಪಕ್ಕದ (ಟೆಂಪೋರಲ್ ಲೋಬ್) ಹಾಲೆಗಳಲ್ಲಿ ನರಕೋಶಗಳ ಅಶಕ್ತತೆ ಕಂಡುಬರುತ್ತದೆ. ಇದಕ್ಕೆ ಫ್ರಂಟೋ ಟೆಂಪೋರಲ್ ಡಿಮೆನ್ಸಿಯಾ ಅನ್ನುತ್ತಾರೆ. ಮೆದುಳಿನ ಸ್ಕ್ಯಾನ್ ಮಾಡಿಸಿ ನೋಡಿದಾಗ ಈ ಸಮಸ್ಯೆ ನಿಖರವಾಗಿ ಕಾಣುತ್ತದೆ. ಆದರೆ ನಮ್ಮ ಸಮಾಜದಲ್ಲಿ ವೃದ್ಧಾಪ್ಯದಲ್ಲಿ ಮಾಟ, ಮಂತ್ರಗಳ ಕಾರಣದಿಂದ ಈ ರೀತಿಯಾಗುತ್ತದೆ ಎಂಬ ಮೂಢನಂಬಿಕೆ ಇದೆ. ಈ ಸಮಸ್ಯೆಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿ ವೈದ್ಯರ ಮಾರ್ಗದರ್ಶನ ಪಡೆದರೆ ಸಾಧ್ಯವಿದ್ದಷ್ಟು ಸಹಜ ಜೀವನವನ್ನು ನಡೆಸಬಹುದು. ಸಾಮಾನ್ಯವಾಗಿ ನಾವು ನೋಡುವ ಮೆದುಳಿನ ನಶಿರೋಗ (ಅಲ್‌ಜೈಮರ್ಸ್‌ ಡಿಮೆನ್ಷಿಯಾ) ದಲ್ಲಿ ಮರೆವು ಹೆಚ್ಚು ಕಂಡರೆ ಈ ರೋಗದಲ್ಲಿ ವರ್ತನೆಯ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಈ ಎಲ್ಲ ಸಮಸ್ಯೆಗಳು ಕೂಡಿ ಇರುವದರಿಂದ ಇದಕ್ಕೆ ವರ್ತನೆಯ ಚಿಕಿತ್ಸೆಯ ಜೊತೆಗೆ ನರರೋಗ ತಜ್ಞರ ಸಲಹೆ ಕೂಡ ಅತ್ಯವಶ್ಯಕ ಇರುತ್ತದೆ.

ಮನೆಯಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ ಅವರ ಆರೈಕೆ ಮಾಡುವವರಲ್ಲಿ ಒತ್ತಡ ಮತ್ತು ಅಸಹಾಯಕತೆಯ ಭಾವನೆ ಮೂಡುವದು ಸಹಜ. ಆದ್ದರಿಂದ ಈ ನಿರ್ದಿಷ್ಟ ಪ್ರಕರಣದಲ್ಲಿ ರೋಗಿಗೆ ನರ ಮತ್ತು ಮನೋವೈದ್ಯರ ತಂಡದಿಂದ ಮಾರ್ಗದರ್ಶನ ಮತ್ತು ಚಿಕಿತ್ಸೆ ಕೊಡಲಾಯಿತು. ಔಷಧಗಳನ್ನು ನೀಡಿ ಸಮಾಧಾನ ಹೇಳಿ ಕಳುಹಿಸಲಾಯಿತು.

ಒಂದು ತಿಂಗಳ ನಂತರ ಮರು ತಪಾಸಣೆಗೆ ಬಂದಾಗ ಮನೆಯವರಲ್ಲಿ ಸಂತೋಷ ಕಂಡುಬಂದಿತು. ಅದರಲ್ಲಿ ಅವರಲ್ಲಿಯ ನಿಗದಿತವಾದ ದಿನಚರಿ, ನಿತ್ಯದ ಪ್ರಾರ್ಥನೆ, ವ್ಯಾಯಾಮ ಪ್ರಾರಂಭವಾಗಿದ್ದನ್ನು ಕೇಳಿದಾಗ ಸಮಾಧಾನವಾಯಿತು. ವಯಸ್ಸಿನ ಜೊತೆಗೆ ನರಕೋಶಗಳ ಕಾರ್ಯಕ್ಷಮತೆ ಕಡಿಮೆಯಾಗುವದು ಸಹಜ. ಆದರೆ ಬೇಗನೇ ಗುರುತಿಸಿ ಚಿಕಿತ್ಸೆ ನೀಡಿದರೆ ಅವರ ಜೀವನದ ಮಟ್ಟವನ್ನು ಸುಧಾರಿಸಬಹುದು. ಈ ದಿಶೆಯಲ್ಲಿ ನಮ್ಮ ಚಿಂತನೆ ಇದ್ದರೆ ಸೂಕ್ತವಲ್ಲವೇ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net