

ಚಿಕ್ಕಮಗಳೂರು: ಚುನಾವಣೆಯಲ್ಲಿ ಸೋಲಿಗೆ ಆಗಿರುವ ತಪ್ಪನ್ನು ತಿದ್ದುಕೊಂಡು ಮುಂದಿನ ಚುನಾವಣೆಗಳಿಗೆ ಸಿದ್ಧರಾಗಬೇಕು. ವರ್ತಮಾನವನ್ನು ಎದುರಿಸಲು ರಾಜಕೀಯ ಪರಾಮರ್ಶೆ ಮಾಡಲೇಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಹಾಗೂ ಪ್ರವಾಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಸೋತಿದ್ದೇವೆ. ಈಗ ಏನು ಹೇಳಿದರೂ ಸಮಾಧಾನದ ಮಾತಾಗುತ್ತದೆ. ಮತ್ತೆ ನಾವು ಗೆಲುವಿನ ಕಡೆಗೆ ಹೆಜ್ಜೆ ಹಾಕಿದಾಗ ಮಾತ್ರ ಸೋಲಿನ ನೋವು ದೂರಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆ ಸಿದ್ಧತೆ ನಡೆಸಿದ್ದೇವೆ. ಮನೆಯಲ್ಲೇ ಆಘಾತ ಉಂಟಾದರೆ ನೋವು ಇರುತ್ತದೆ. ನಿಧಾನವಾಗಿ ಸಹಜ ಸ್ಥಿತಿಗೆ ಹೋಗುವ ಪ್ರಯತ್ನ ನಡೆಯುತ್ತದೆ ಎಂದರು.
ಚುನಾವಣೆಯಲ್ಲಿ ಸೋತಿದ್ದೇವೆ ಎಂದರೆ ಶರಣಾಗಿದ್ದೇವೆ ಎಂದರ್ಥವಲ್ಲ. ಸೋಲು ಎನ್ನುವುದು ಅನಾಥ. ಸೋಲಿಗೆ ಇನ್ನೊಬ್ಬರ ಕಡೆಗೆ ಬೊಟ್ಟು ಮಾಡಿ ತೋರಿಸುವುದಿಲ್ಲ. ನಮ್ಮ ಕಾರ್ಯಕರ್ತರಿಗೆ ತಲೆಬಾಗುತ್ತೇವೆ. ಹಾಗಾಗಿ ನಮ್ಮಿಂದ ತಪ್ಪುಗಳಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಗೆ ಬಂದಿದ್ದೇವೆ. ನೀತಿ ಮತ್ತು ನಾಯಕತ್ವ ಮುಂದಿಟ್ಟುಕೊಂಡು ಗೆಲುವಿನತ್ತ ಸಾಗಬೇಕು ಎಂದರು.
ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ ಶೆಟ್ಟಿ , ಬಿ.ಕೆ.ಗಣೇಶ್ ರಾವ್, ಗಿರೀಶ್ ಪಟೇಲ್, ಪುಣ್ಯಪಾಲ್ ಇತರರಿದ್ದರು.