

ಚೆನ್ನೈ: ವೈಮಾನಿಕ ಪ್ರದರ್ಶನ(Chennai Air Show)ದಲ್ಲಿ ಸಂಭವಿಸಿದ ದುರಂತದಲ್ಲಿ ಐವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ನೂಕುನುಗ್ಗಲು ಮತ್ತು ದುರಾಡಳಿತದಿಂದ ಈ ಪರಿಸ್ಥಿತಿ ಉದ್ಭವಿಸಿಲ್ಲ ಎಂಬ ಟೀಕೆಗೆ ರಾಜ್ಯ ಸರ್ಕಾರ ಉತ್ತರ ನೀಡಿದೆ. ಆಸ್ಪತ್ರೆಗೆ ದಾಖಲಾಗಿದ್ದ ಹಲವರು ಡಿಸ್ಚಾರ್ಜ್ ಆಗಿದ್ದು, ರಾಜೀವ್ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ಡಿಎಂಕೆ ನಾಯಕ ಸರವಣನ್ ಅಣ್ಣಾದೊರೈ ಬಹಿರಂಗಪಡಿಸಿದ್ದಾರೆ.
ಬೃಹತ್ ವೈಮಾನಿಕ ಪ್ರದರ್ಶನ ನಡೆಸಲಾಗುತ್ತಿದೆ ಎಂದು ವ್ಯಾಪಕ ಪ್ರಚಾರ ಮಾಡಲಾಗಿತ್ತು. ಭಾನುವಾರ ರಜಾದಿನವಾಗಿದ್ದರಿಂದ ಸುಮಾರು 15 ಲಕ್ಷ ಜನರು ಆಗಮಿಸಲಿದ್ದಾರೆ ಎಂದು ಇಂಟ್ಲಿಜೆನ್ಸ್ ವರದಿ ಸಹ ನೀಡಲಾಗಿತ್ತು. ಅದರಂತೆ ಸಮುದ್ರ ತೀರದಲ್ಲಿ 14-15 ಕಿಮೀ ಜನಜಂಗುಳಿ ನೆರೆದಿತ್ತು. ಕಾರ್ಯಕ್ರಮದ ಆರಂಭದಲ್ಲಿಯೇ ಹಲವು ರಸ್ತೆಗಳು ಬಂದ್ ಆಗಿದ್ದು, ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಬೀಚ್ ರಸ್ತೆಯಲ್ಲಿ ನೀರಿಲ್ಲದೆ ಬಿಸಿಲಿನ ತಾಪಕ್ಕೆ ಯಾರೂ ಹೋಗಲಾಗದೆ ಪರದಾಡುವಂತಾಯಿತು. ಟ್ರಾಫಿಕ್ ಸಮಸ್ಯೆ ತಪ್ಪಿಸಲು ಹಲವರು ಉಪನಗರ ಮತ್ತು ಮೆಟ್ರೊ ರೈಲುಗಳನ್ನು ಆಶ್ರಯಿಸಿದರೆ, ಆ ನಿಲ್ದಾಣಗಳಲ್ಲಿಯೂ ಭಾರಿ ತಳ್ಳಾಟ ನಡೆಯಿತು. ಇದಕ್ಕೆಲ್ಲ ಯಾರು ಹೊಣೆ. ಮುಂಜಾಗ್ರತಾ ಕ್ರಮಗಳನ್ನು ಏಕೆ ಗೆತೆದುಕೊಂಡಿರಲಿಲ್ಲ ಎಂದು ಎಐಎಡಿಎಂಕೆ ಮತ್ತು ಬಿಜೆಪಿ ಟೀಕಿಸಿವೆ.
ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೇರಿದಂತೆ ಪ್ರಮುಖ ನಾಯಕರು ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.
ಎಐಎಡಿಎಂಕೆ ಮುಖ್ಯಸ್ಥ ಪಳನಿಸ್ವಾಮಿ, ಪೊಲೀಸ್ ಮತ್ತು ಇತರ ಇಲಾಖೆಗಳ ನಡುವಿನ ಸಮನ್ವಯತೆ ಮತ್ತು ಸಾಕಷ್ಟು ವ್ಯವಸ್ಥೆಗಳ ಕೊರತೆಯಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಡಿಎಂಕೆಯ ಸರವಣನ್ ಪ್ರತಿಕ್ರಿಯಿಸಿ, "ನಾವು ಈ ಕಾರ್ಯಕ್ರಮವನ್ನು ಸರಿಯಾದ ರೀತಿಯಲ್ಲಿ ಆಯೋಜಿಸಿದ್ದೆವು. ಐದು ಜನರು ಸಾವನ್ನಪ್ಪಲು ಕಾರಣಗಳನ್ನು ತನಿಖೆ ಮಾಡುತ್ತಿದ್ದೇವೆ. ಪ್ರದರ್ಶನದ ಸಮಯದಲ್ಲಿ ತಾಪಮಾನ ಹೆಚ್ಚಾಗಿದ್ದು, ಜನರು ದೂರದವರೆಗೆ ನಡೆದುಕೊಂಡೇ ಹೋಗಬೇಕಾಗಿತ್ತು. ಈ ಘಟನೆಯನ್ನು ರಾಜಕೀಯಗೊಳಿಸುವುದಕ್ಕೆ ಡಿಎಂಕೆ ಸರ್ಕಾರವನ್ನು ವಿರೋಧಿಸುತ್ತದೆ ಎಂದಿದ್ದಾರೆ.
ಡಿಎಂಕೆ ಸಂಸದೆ ಕನಿಮೋಳಿ ಪ್ರತಿಕ್ರಿಯಿಸಿ, ''ಏರ್ ಶೋ ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು. ಅಧಿಕ ತಾಪಮಾನದಿಂದ ಐವರು ಸಾವನ್ನಪ್ಪಿದ ಸುದ್ದಿ ಆಘಾತ ತಂದಿದೆ ಎಂದಿದ್ದಾರೆ.