ಅಭ್ಯರ್ಥಿ-ಶಾಸಕರ ಮೌಲ್ಯಮಾಪನಕ್ಕೆ ಹೊರಟ ಡಿಕೆಶಿ; ತಂತ್ರಜ್ಞಾನ ಮುಖೇನ ಕೋಆರ್ಡಿನೇಟರ್​ಗಳ ಕಾರ್ಯವೈಖರಿ ಪರಿಶೀಲನೆ

state 2
Published on

ಬೆಂಗಳೂರು: ಪಕ್ಷದ ಶಾಸಕರು, ಮಾಜಿ ಶಾಸಕರು, 2018ರ ಚುನಾವಣೆಯ ಪಕ್ಷದ ಅಭ್ಯರ್ಥಿಗಳು ಯಾವ ಸ್ಥಿತಿಯಲ್ಲಿದ್ದಾರೆ, ಪಕ್ಷ ಸಂಘಟನೆಗೆ ಯಾವ ರೀತಿ ಕೊಡುಗೆ ನೀಡಿದ್ದಾರೆ, ಜನರ ನಡುವೆ ಇದ್ದಾರೆಯೇ ಎಂದು ತಿಳಿಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಯತ್ನ ಆರಂಭಿಸಿದ್ದಾರೆ. ಎರಡು ತಿಂಗಳ ಹಿಂದೆ 400ಕ್ಕೂ ಹೆಚ್ಚು ಸಮನ್ವಯಕಾರರನ್ನು ಕೆಪಿಸಿಸಿಯಿಂದ ನೇಮಿಸಲಾಗಿತ್ತು. ಜವಾಬ್ದಾರಿ ನೀಡಿದ ಸ್ಥಳಗಳಿಗೆ ಸಮನ್ವಯಕಾರರು ಹೋಗಿದ್ದರೆ, ಅಲ್ಲಿ ಮಾರ್ಗಸೂಚಿಯಂತೆ ಸಭೆ ಮಾಡಿದ್ದರೇ ಎಂದು ತಿಳಿದುಕೊಳ್ಳುವ ಕೆಲಸ ಆರಂಭವಾಗಿದೆ. ಯಾರು ಪಕ್ಷ ನೀಡಿದ ಜವಾಬ್ದಾರಿ ಸರಿಯಾಗಿ ನಿರ್ವಹಿಸಿಲ್ಲವೋ ಅವರನ್ನು ವಿಮುಕ್ತಿಗೊಳಿಸಲು ನಿರ್ಧರಿಸಲಾಗಿದೆ. ಸರಿಯಾಗಿ ಕೆಲಸ ಮಾಡಿದವರಿಗೆ ಮುಂದಿನ ಟಾಸ್ಕ್ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದು ಭಾಗದಲ್ಲಿ 224 ವಿಧಾನಸಭಾ ಕ್ಷೇತ್ರದಲ್ಲಿರುವ ಹಾಲಿ ಶಾಸಕರು ಅಥವಾ 2018ರ ಚುನಾವಣೆಯಲ್ಲಿ ಸೋತವರು ಪ್ರತಿಜ್ಞೆ ಕಾರ್ಯಕ್ರಮದಲ್ಲಿ ಯಾವ ರೀತಿ ತೊಡಗಿಕೊಂಡಿದ್ದರೆಂದು ಅವಲೋಕನ ಮಾಡುತ್ತಿದ್ದಾರೆ.

ಪ್ರತಿಜ್ಞೆ ಕಾರ್ಯಕ್ರಮ ನಡೆದ ದಿನ ಅವರೆಲ್ಲಿದ್ದರು, ಕಾರ್ಯಕ್ರಮದಲ್ಲಿದ್ದರೇ, ಸ್ಥಳೀಯವಾಗಿ ಕ್ಷೇತ್ರದಲ್ಲಿ ಕಾರ್ಯಕ್ರಮ ರೂಪಿಸಲು ಅವರ ಕೊಡುಗೆ ಏನು? ಟಿವಿ, ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದರೆ ಎಂಬುದನ್ನೂ ದಾಖಲೆ ಸಹಿತ ವರದಿ ಪಡೆದುಕೊಳ್ಳಲು ತಮ್ಮ ತಂಡಕ್ಕೆ ಡಿಕೆಶಿ ಸೂಚಿಸಿದ್ದಾರೆ. 2024ರ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷದ ಪುನರ್ ಸಂಘಟನೆಗೆ ಕೈ ಹಾಕಿರುವ ಡಿಕೆಶಿ, ಅಭ್ಯರ್ಥಿ ಆಗಬೇಕಾದವರ ಉತ್ಸಾಹ ಎಷ್ಟಿದೆ ಎಂದು ಅಳೆಯಲು ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net