

ಬೆಂಗಳೂರು: ಆ್ಯಸಿಡ್ ಮೊಟ್ಟೆ ದಾಳಿ ಪ್ರಕರಣ ಪೂರ್ವನಿಯೋಜಿತ. ಶಾಸಕ ಮುನಿರತ್ನ ಅಭಿನಯದ 'ಆ್ಯಸಿಡ್ ಮೊಟ್ಟೆ' ಸಿನಿಮಾವನ್ನು ಶತದಿನೋತ್ಸವ ತಲಪುವ ತನಕ ಓಡಿಸಿ" ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ತಮ್ಮ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಡಿ.ಕೆ. ಸುರೇಶ್, "ವಿಡಿಯೋ ಪ್ರಕರಣ ಹಾಗೂ ಮಾಧ್ಯಮದ ವರದಿಗಳನ್ನು ನೋಡಿದಾಗ ಬಿಜೆಪಿ ಶಾಸಕರು, ನನ್ನ ಮೇಲೆ, ನನ್ನ ಸಹೋದರ ಹಾಗೂ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ ಹಾಗೂ ಅವರ ತಂದೆ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಈ ವಿಡಿಯೋ ಅತ್ಯುತ್ತಮವಾಗಿ ಮೂಡಿಬಂದಿದೆ. ಆ್ಯಸಿಡ್ ದಾಳಿ ಎಂದ ಮೂರು ಸೆಕೆಂಡ್ನಲ್ಲಿ ಮೊಟ್ಟೆ ಎಸೆಯಲಾಗಿದೆ" ಎಂದರು.
"ಕನ್ನಡ ಚಿತ್ರರಂಗದ ನಿರ್ಮಾಪಕರು, ಚಿತ್ರಕಥೆ ತಿರುಚುವ ಕೆಲಸ ಮಾಡಿದ್ದ ಮುನಿರತ್ನ, ಈಗ ತಾವೇ ನಟನೆಗೂ ಇಳಿದಿದ್ದಾರೆ ಎಂದು ಈ ವಿಡಿಯೋ ನೋಡಿದ ಮೇಲೆ ನನಗೆ ತಿಳಿಯಿತು. ಅದಕ್ಕಾಗಿ ಒಳ್ಳೆ ಡ್ರಾಮಾ ಮಾಡಿ ಮಾಧ್ಯಮಗಳ ಕೈಗೆ ನೀಡಿದ್ದಾರೆ. ಮಾಧ್ಯಮಗಳು ಕೂಡ ಏನೂ ಸುದ್ದಿ ಇಲ್ಲ ಎಂದು ಇದನ್ನು ಚೆನ್ನಾಗಿ ಬಿತ್ತರಿಸಿದ್ದೀರಿ. ಅಭಿನಯ ಮಾಡಿದ ಅವರಿಗೂ ಅಭಿನಂದನೆ, ಅದನ್ನು ತೋರಿಸಿದ ನಿಮಗೂ ಅಭಿನಂದನೆಗಳು. ಈ ವಿಚಾರವಾಗಿ ಪ್ರಧಾನಮಂತ್ರಿ, ಕೇಂದ್ರ ಗೃಹಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ" ಎಂದು ಹೇಳಿದರು.
"ಮುನಿರತ್ನ ಅವರು ಇಂತಹ ಅನೇಕ ಸಿನೆಮಾ ಮಾಡಿದ್ದು, ಕೆಲವು ಡಬ್ಬಾ ಯಶಸ್ವಿಯಾದರೆ, ಮತ್ತೆ ಕೆಲವು ಯಶಸ್ವಿಯಾಗಿಲ್ಲ. ಹೀಗಾಗಿ ಹೊಸ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಮೊದಲು ಮಾಧ್ಯಮಗಳನ್ನು ಬಳಸಿಕೊಂಡು ಮಾರುಕಟ್ಟೆ ಇದ್ದರೆ ನಂತರ ಸಿನಿಮಾ ಮಾಡಲು ಮುಂದಾಗಿದ್ದಾರೆ" ಎಂದರು.
ಈ ಪ್ರಕರಣವನ್ನು ಸಿಬಿಐಗೆ ನೀಡಲಿ. ಗೃಹಮಂತ್ರಿಗೆ ಪತ್ರ ಬರೆದು ಎಸ್ಪಿಜಿ ಭದ್ರತೆಯನ್ನೇ ಪಡೆಯಲಿ. ಕಾರಣ ಅವರ ಬಳಿ ರಘು ಎಂಬ ಚಾಲಕ ಇದ್ದ. ಅವನು ಏನಾದ ಎಂದು ತಿಳಿಯಬೇಕಲ್ಲವೇ. ಉಳಿದ ವಿಚಾರಗಳನ್ನು ಮಾಧ್ಯಮಗಳೇ ತನಿಖೆ ಮಾಡಿ ಪ್ರಸಾರ ಮಾಡಿ. ಮತ್ತೊಬ್ಬ ಮಲತಹಳ್ಳಿ ರಂಜಿತ್ ಎಂಬ ಹುಡುಗನ ಕೈ-ಕಾಲು ಮುರಿದಿದ್ದಾರೆ. ಇಷ್ಟು ದಿನ ಅವರ ಖಾಸಗಿ ವಿಚಾರ ಮಾತನಾಡಬಾರದು ಎಂದು ಸುಮ್ಮನೆ ಇದ್ದೆ. ಈ ಪ್ರಕರಣಗಳನ್ನು ಸಿಬಿಐ ತನಿಖೆಯಾಗಲಿ ಎಂದು ಪತ್ರ ಬರೆಯಲಿ. ಅವರ ಹೈಕಮಾಂಡ್ ಗೆ ಕೊಟ್ಟಿರುವ ವರದಿಯಲ್ಲಿ ಇದನ್ನು ಸೇರಿಸಲಿ ಎಂದು ಹೇಳಿದರು.
"ನನ್ನನ್ನು ಸೋಲಿಸಿದರು ಎಂದು ಹೇಳುತ್ತಾರೆ. ನನ್ನನ್ನು ಸೋಲಿಸಿದವರು ಜನರೇ ಹೊರತು ಬಿಜೆಪಿ ನಾಯಕರಲ್ಲ ಎಂದು ಫಲಿತಾಂಶ ಬಂದ ದಿನವೇ ಹೇಳಿದ್ದೇನೆ. ಇವರ ಯೋಗ್ಯತೆಗೆ ನನ್ನ ಸೋಲಿಸಲು ಆಗುವುದಿಲ್ಲ. ಜನರು ತೀರ್ಮಾನಿಸಿ ನನ್ನ ಸೋಲಿಸಿದ್ದಾರೆ. ಅದನ್ನು ನಾನು ಒಪ್ಪಿದ್ದೇನೆ. ಇವರು ದೊಡ್ಡ ಸಾಧನೆ ಮಾಡಿರುವವರಂತೆ ನನ್ನ ಹೆಸರು ಹೇಳಿಕೊಂಡು ಇವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ನಲ್ಲಿ ನನ್ನ ಹಾಗೂ ನಮ್ಮ ಅಣ್ಣನ ಹೆಸರು ಹೇಳಿದರಷ್ಟೇ ಇವರ ಸಿನಿಮಾ ನಡೆಯುತ್ತದೆ" ಎಂದು ವ್ಯಂಗ್ಯವಾಡಿದರು.