

ರಾಮನಗರ: ರೈತರಿಗೆ, ಜನರಿಗೆ, ಜಾನುವಾರುಗಳಿಗೆ ಉಪಯೋಗವಾಗಲಿ ಎಂದು ಸಿ.ಪಿ. ಯೋಗೇಶ್ವರ್ ಕ್ಷೇತ್ರದ ಕೆರೆಗಳನ್ನು ತುಂಬಿಸಿದರು. ಬೇರೆಯವರು ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಕಣ್ಣೀರಿನಿಂದ ಕೆರೆಗಳನ್ನು ತುಂಬಿಸುತ್ತಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರೇಳದೆ ವ್ಯಂಗ್ಯವಾಡಿದ್ದಾರೆ.
"ಚನ್ನಪಟ್ಟಣದ ಬೇವೂರಿನಲ್ಲಿ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, "ಬಿಜೆಪಿ ಮತ್ತು ದಳದ ನಾಯಕರು ನಿಖಿಲ್ ಕುಮಾರಸ್ವಾಮಿಗೆ ಅನ್ಯಾಯವಾಗಿದೆ ಎಂದು ಕ್ಷೇತ್ರದ ಉದ್ದಕ್ಕೂ ಪ್ರಚಾರ ಮಾಡುತ್ತಿದ್ದಾರೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರದ ಜನ ನಿಖಿಲ್ಗೆ ಅನ್ಯಾಯ ಮಾಡಿದ್ದಾರೆಯೇ? ಇವರಿಗೆ ಅನ್ಯಾಯ ಮಾಡಿದವರು ಯಾರು? ಯಾರಿಗೆ ಅನ್ಯಾಯವಾಗಿದೆ ಎಂಬುದು ಜನರಿಗೆ ತಿಳಿದಿದೆ" ಎಂದರು.
"ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಚನ್ನಪಟ್ಟಣ ಚಿನ್ನದ ನಾಡಾಗುತ್ತದೆ ಎಂದು ಕ್ಷೇತ್ರದ ಜನರು ನಂಬಿದ್ದರು. ಆದರೆ, ದೂರದ ಬೆಟ್ಟ ನುಣ್ಣಗಿದೆ ಎಂಬುದು ತಡವಾಗಿ ಗೊತ್ತಾಗಿದೆ. ಆದರೆ, ಇಲ್ಲಿನ ರೈತರ ಬದುಕನ್ನು ಹಸನು ಮಾಡಿದ, ಕೆರೆಗಳನ್ನು ತುಂಬಿಸಿದ ಯೋಗೇಶ್ವರ್ಗೆ ನಿಜವಾಗಿಯೂ ಅನ್ಯಾಯವಾಗಿದೆ" ಎಂದು ಕಿಡಿಕಾರಿದರು.
"ಮಂಡ್ಯದಲ್ಲಿ ನಿಖಿಲ್ಗೆ ಅನ್ಯಾಯವಾಗಿದೆ ಎಂದು ಭಾವನಾತ್ಮಕವಾಗಿ ಕುಮಾರಸ್ವಾಮಿ ಮಾತನಾಡಿ ಲೋಕಸಭಾ ಚುನಾವಣೆ ಗೆದ್ದು, ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಹಾಗಾದರೆ ಇಲ್ಲಿ ಯಾರಿಗೆ ಅನ್ಯಾಯವಾಗಿದೆ ಎಂದು ಪ್ರಶ್ನಿಸಿದ ಸುರೇಶ್, ನಿಖಿಲ್ ಸೋತ ಕಾರಣಕ್ಕೆ ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿದ್ದಾರೆ" ಎಂದು ಹೇಳಿದರು.