

ಉಡುಪಿ: ಕೋವಿಡ್ ಸಂಕಷ್ಟದ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ನೇತೃತ್ವದಡಿ ಎಲ್ಲರೂ ಒಗ್ಗಟ್ಟಾಗಿ ಸಂಘಟನೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಭಾನುವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿ. ನನ್ನಿಂದ ಪಕ್ಷ ಎಂಬ ಭ್ರಮೆಯಿಂದ ಹೊರಬರಬೇಕು. ಪಕ್ಷದೊಳಗಿನ ಅಧಿಕಾರಕ್ಕಾಗಿ ಬ್ಲಾಕ್‌ಮೇಲ್ ತಂತ್ರಗಳು, ಚಾಡಿ ಹೇಳುವುದು ಇನ್ನ್ನು ಮುಂದೆ ನಡೆಯಲ್ಲ ಎನ್ನುವ ಮೂಲಕ ಪಕ್ಷದೊಳಗಿನ ಭಿನ್ನಮತೀಯರಿಗೆ ಚಾಟಿ ಬೀಸಿದರು. ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ನನಗೆ ಅನ್ಯಾಯ ಆದಾಗ ಪ್ರೀತಿ ತೊರಿದ್ದೀರಿ, ನನಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಬಂದಿದೆ. ಬಿಜೆಪಿ ಧರ್ಮ, ಜಾತಿ ಹೆಸರಲ್ಲಿ ರಾಜಕೀಯ ಮಾಡುತ್ತಿದೆ. ಪ್ರಜ್ಞಾವಂತ ಮತದಾರರಿಗೆ ಇದರ ಅರಿವಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಒತ್ತು ನೀಡಿ ಚುನಾವಣೆಗೆ ಪೂರ್ವತಯಾರಿ ನಡೆಸಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಯು.ಆರ್ ಸಭಾಪತಿ, ಗೋಪಾಲ ಪೂಜಾರಿ, ಮುಖಂಡರಾದ ಎಂ.ಎ ಗಫೂರ್, ಮಿಥುನ್ ರೈ, ಪುಷ್ಪ ಅಮರನಾಥ್, ಗೀತಾ ವಾಗ್ಳೆ, ವೆರೋನಿಕಾ ಕರ್ನೆಲಿಯೋ, ಜನಾರ್ದನ ತೋನ್ಸೆ, ಸಚಿನ್ ಮಿಗಾ, ರಾಜಶೇಖರ್ ಕೋಟ್ಯಾನ್, ಪ್ರಖ್ಯಾತ್ ಶೆಟ್ಟಿ, ವಿಶ್ವಾಸ್ ಅಮೀನ್, ದಿನೇಶ್ ಪುತ್ರನ್, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ನವೀನ್‌ಚಂದ್ರ ಸುವರ್ಣ, ಪ್ರವೀಣ್ ಶೆಟ್ಟಿ, ಸತೀಶ್ ಅಮಿನ್ ಪಡುಕೆರೆ, ದಿನಕರ ಹೇರೂರು, ಹರಿಪ್ರಸಾದ್ ಶೆಟ್ಟಿ, ಶಂಕರ್ ಕುಂದರ್, ಮದನ್‌ಕುಮಾರ್, ಪ್ರದೀಪ್‌ಕುಮಾರ್ ಶೆಟ್ಟಿ ಮತ್ತಿತರರಿದ್ದರು.
ಕಸ್ತೂರಿ ರಂಗನ್ ವರದಿ ಜಾರಿಗೆ ಕಾಲಾವಕಾಶ ಮುಗಿಯುತ್ತಿದೆ. ಕೋಟ್ಯಂತರ ರೈತರು ಇದರಿಂದ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರೈತರು ಭೂಮಿ ಮೇಲಿನ ಹಿಡಿತವನ್ನೇ ಕಳೆದುಕೊಳ್ಳಲಿದ್ದಾರೆ. ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದರೂ, ಪ್ರಯೋಜನ ಇಲ್ಲ. ಕಸ್ತೂರಿ ರಂಗನ್ ವರದಿಗೆ ತಿದ್ದುಪಡಿ ತರಲು ಕಾಂಗ್ರೆಸ್ ಸರ್ಕಾರ ಮಾಡಿದ ಶಿಫಾರಸನ್ನು ಬಿಜೆಪಿ ತಿರಸ್ಕರಿಸಿತ್ತು. - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಮರ್ಮ ಹೊರಬರಲಿ: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನದ ಹಿಂದಿನ ರಾಜಕಾರಣ ಹೊರಬರಲಿ ಎಂದು ಡಿ.ಕೆ ಶಿವಕುಮಾರ್ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಅವರ ಪತ್ನಿಯ ಹೇಳಿಕೆ ಪ್ರಕಾರ ಸಂಸಾರದಲ್ಲಿ ಬಿರುಕಿರಲಿಲ್ಲ. ರಾಜಕೀಯ ಒತ್ತಡವೇ ಆತ್ಮಹತ್ಯೆ ಯತ್ನಕ್ಕೆ ಕಾರಣ. ಓರ್ವ ಮಾಧ್ಯಮ ಕಾರ್ಯದರ್ಶಿ ರಾಜೀನಾಮೆ ನೀಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಂದರೆ ಸಾಮಾನ್ಯ ಕಾರ್ಯಕರ್ತನಲ್ಲ. ಬಿಜೆಪಿಯ ಎಲ್ಲ ರಾಜಕೀಯ ಬೆಳವಣಿಗೆ ವೇಳೆ ಸಂತೋಷ್ ಹೆಸರು ಕೇಳಿಬರುತ್ತದೆ. ವಿರೋಧ ಪಕ್ಷದ ಅಧ್ಯಕ್ಷನಾಗಿ ಕಣ್ಮುಚ್ಚಿ ಕುಳಿತಿರಲು ಸಾಧ್ಯವಿಲ್ಲ. ಗೃಹ ಸಚಿವರು ತನಿಖೆ ಮಾಡುತ್ತೇವೆ ಎಂದಿದ್ದಾರೆ. ಜನರಿಗೆ ಇದರ ಹಿಂದಿನ ಸತ್ಯವನ್ನು ಸರ್ಕಾರ ತಿಳಿಸಬೇಕು ಎಂದರು.
ಬದಲಾಗಲಿದೆ ಕಾಂಗ್ರೆಸ್: ನಾವು ಬದಲಾವಣೆಯ ಕಾಲಘಟ್ಟದಲ್ಲಿದ್ದೇವೆ. ಕಾಂಗ್ರೆಸ್ ಪಕ್ಷದ ಆಚಾರ, ವಿಚಾರ ಬದಲಾಗಲಿದೆ. ಕೆಪಿಸಿಸಿ ಎಲ್ಲ ರೀತಿಯ ಕಾರ್ಯಯೋಜನೆಗಳನ್ನು ರೂಪಿಸುತ್ತಿದ್ದು, ಪಕ್ಷದ ಕಾರ್ಯಕರ್ತರು ವಿನೂತನ ರೀತಿಯಲ್ಲಿ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಡಿ.ಕೆ ಶಿವಕುಮಾರ್ ಕರೆ ನೀಡಿದರು. ಬೂತ್ ಮಟ್ಟದಲ್ಲಿ ಮಹಿಳಾ, ವಿದ್ಯಾರ್ಥಿ, ಕಾರ್ಮಿಕ, ಹಿಂದುಳಿದ ಘಟಕಗಳ 24 ಮಂದಿ ಸದಸ್ಯರುಳ್ಳ ಪ್ರಜಾಪ್ರತಿನಿಧಿ ಸಮಿತಿ ರಚಿಸಬೇಕು. ಎಲ್ಲೋ ಕುಳಿತು ಸಭೆ-ಚರ್ಚೆ ಮಾಡಿ ಸದಸ್ಯರನ್ನು ನೇಮಿಸುವುದಲ್ಲ. ಈ ಬಗ್ಗೆ ಜಿಪಿಎಸ್ ಆಧರಿತ ವ್ಯವಸ್ಥೆ ಜಾರಿಗೆ ತರಲಾಗುವುದು. ಬೂತ್ ಮಟ್ಟದ ಚಟುವಟಿಕೆ ಮೇಲೆ ನಿಗಾ ವಹಿಸಲಾಗುವುದು. ವ್ಯವಸ್ಥಿತವಾಗಿ ಪಕ್ಷ ಸಂಘಟನೆ ಆಗದಿದ್ದರೆ ಪಕ್ಷಕ್ಕೆ ಅಧಿಕಾರ ಸಿಗುವುದಿಲ್ಲ. ಕಾರ್ಯಕರ್ತರ ಧ್ವನಿ ಡಿಕೆಶಿ ಧ್ವನಿಯಾಗಬೇಕು. ಬೂತ್ ಮಟ್ಟದಲ್ಲಿ ಡಿಜಿಟಲ್ ಯೂತ್ ಕಮಿಟಿ ರಚನೆಯಾಗಬೇಕು. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.