

ಬೆಂಗಳೂರು: ನೈಸ್ ವಿಚಾರಕ್ಕೆ ಸಂಬಂಧಿಸಿದಂತೆ ಎಚ್.ಡಿ. ಕುಮಾರಸ್ವಾಮಿ ಅವರು ದಾಖಲೆ ಬಿಡುಗಡೆಗೊಳಿಸಲಿದ್ದೇನೆ ಎಂದು ನೀಡಿದ ಹೇಳಿಕೆಗೆ ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
"ಕುಮಾರಸ್ವಾಮಿ ಅವರನ್ನು ತಡೆದಿರುವವರು ಯಾರು? ಯಾವ ದಾಖಲೆಗಳನ್ನು ಬೇಕಾದರೂ ಬಿಡುಗಡೆ ಮಾಡಲಿ. ತನಿಖೆ ನಡೆಸುವ ಅವಕಾಶ ಅವರಿಗೆ ಇತ್ತಲ್ವಾ? ಪ್ರಜಾಪ್ರಭುತ್ವದಲ್ಲಿ ಯಾರು ಏನು ದಾಖಲೆಯನ್ನು ರಿಲೀಸ್ ಮಾಡಲು ಸ್ವಾತಂತ್ರ್ಯರಿದ್ದಾರೆ. ಅದನ್ನು ಯಾರಾದರೂ ತಡೆಯಲು ಆಗುತ್ತಾ. ರಾಮನಗರಕ್ಕೆ ನೈಸ್ನಿಂದ ಏನು ಅನುಕೂಲವಾಗ್ತಿತ್ತು, ಬೇರೆ ಬೇರೆಯವರದು ಎಲ್ಲೆಲ್ಲಿ ಏನಿದೆ. ಇದ್ಯಾವುದು ನನಗೆ ಗೊತ್ತಿಲ್ವಾ" ಎಂದು ಹೇಳಿದರು.
"ನೈಸ್ನಿಂದ ಬಿಡದಿಗೆ, ಚನ್ನಪಟ್ಟಣಕ್ಕೆ ಏನು ನಷ್ಟವಾಗಿದೆ ಎಂಬುದು ನನಗೆ ತಿಳಿದಿಲ್ವಾ? ನನ್ನ ಬಳಿ ಯಾವ ದಾಖಲೆಗಳೂ ಇಲ್ಲ, ಅದರ ಅವಶ್ಯಕತೆಯೂ ನನಗಿಲ್ಲ. ಕಾನೂನಿನಲ್ಲಿ ತಪ್ಪು ಮಾಡಿದರೆ, ಅದನ್ನು ಅವರು ಮುಗಿಸಿಕೊಳ್ತಾರೆ. ಸದಾ ಸುದ್ದಿಯಲ್ಲಿರಲು ಕುಮಾರಸ್ವಾಮಿ ನನ್ನ ವಿರುದ್ಧ ಈ ರೀತಿ ಮಾತನಾಡುತ್ತಿದ್ದಾರೆ. ಅವರಿಗೆ ತಿಳಿದಿದೆ ನಾನು ಎಷ್ಟು ಹೆದರಿಕೊಳ್ಳುತ್ತೀನಿ ಎಂಬುದು" ಎಂದು ಹೇಳಿದರು.
"ಕುಮಾರಸ್ವಾಮಿ ಅವರು ಏನು ಬೇಕಾದರು ಮಾಡಿಕೊಳ್ಳಲಿ. ಅವರು ಏನೋ ಮಾತನಾಡುತ್ತಿದ್ದಾರೆ. ಎಚ್ಡಿಕೆ ಹೇಳಿಕೆಗಳಿಗೆಲ್ಲಾ ನಾನು ಉತ್ತರ ಕೊಡುವುದಿಕ್ಕೆ ಹೋಗುವುದಿಲ್ಲ. ನಮ್ಮ ಬಗ್ಗೆ ಮಾತನಾಡಿ ಸಂತೋಷ ಪಡುವವರನ್ನು ತಡೆಯಲು ಆಗುತ್ತದೆಯೇ? ಅವರು ಸಂತೋಷವಾಗಿರಲಿ ಬಿಡಿ" ಎಂದು ಹೇಳುವ ಮುಖೇನ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ್ದಾರೆ.