

ಬೆಂಗಳೂರು: ಅವನೇನು ಮೆಂಟ್ಲಾ? ರಾತ್ರೋರಾತ್ರಿ ಬಂದು ನನ್ನ ಕಾಲಿಗೆ ಬಿದ್ದು 15 ದಿನ ಆಗಿಲ್ಲ. ಹೀಗ್ಯಾಕೆ ಹಿಂಗ್ ಆಡ್ತಾವ್ನೆ... ಅವನು ತಲೇನಾ ನನ್ನ ಕಾಲತ್ರ 5 ನಿಮಿಷ ಇಟ್ಟಿದ್ದ... ನಾನೇ ಹೋಗ್ಲಿ ಪಾಪ ಅಂತ 'ನಿನ್ ಪಾರ್ಟಿಗೆ ಲಾಯಲ್ ಆಗಿರು' ಎಂದು ಹೇಳಿ ಕಳಿಸ್ದೆ... ಎನ್ನುತ್ತ ಸಿ.ಪಿ.ಯೋಗೇಶ್ವರ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸಿ.ಪಿ.ಯೋಗೇಶ್ವರ್ ವಿಧಾನ ಪರಿಷತ್ಗೆ ನಾಮನಿರ್ದೇಶನ ಆಗುತ್ತಿದ್ದಂತೆ ಡಿಕೆಶಿ ಮತ್ತು ಎಚ್ಡಿಕೆ ವಿರುದ್ಧ ವಾಕ್ಸಮರ ನಡೆಸಿದ್ದರು. ಡಿಕೆಶಿ ಮತ್ತು ಎಚ್ಡಿಕೆ ಇಬ್ಬರೂ ನಿವೃತ್ತ ಕುದುರೆಗಳು ಎಂದು ಕಟುವಾಗಿ ಟೀಕಿಸಿದ್ದರು. ಇದೀಗ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ತೊಂದರೆ ನೀಡುತ್ತಿದ್ದಾರೆ ಎನ್ನುವ ಮೂಲಕ ಬಿಜೆಪಿ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಡಿಕೆಶಿ, 'ಯೋಗೇಶ್ವರ್ ನನ್ನ ಕಾಲಿಗೆ ಬಿದ್ದು 15 ದಿನ ಆಗಿಲ್ಲ.. ಮತ್ತೆ ಆಟ ಶುರು ಮಾಡಿಕೊಂಡಿದ್ದಾನೆ, ಅವನಿಗೇನು ಮೆಂಟ್ಲಾ?' ಎಂದು ಆಕ್ರೋಶ ಹೊರಹಾಕಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಪಿವೈ, 'ಡಿಕೆಶಿ ಸಹೋದರರು ಕುಮಾರಸ್ವಾಮಿಗೆ ತೊಂದರೆ ಮಾಡ್ತಾ ಇದ್ದಾರೆ. ಎಚ್.ಡಿ. ಕುಮಾರಸ್ವಾಮಿ ನಮ್ಮ ಸರ್ಕಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡ್ತಿದ್ದಾರೆ. ನಮ್ಮ ಪಕ್ಷಕ್ಕೆ ಬೆಂಬಲ ಕೊಡಿ ಹಾಗೂ ನಮ್ಮ ಪಕ್ಷದ ಜತೆಗೆ ಬನ್ನಿ' ಎಂದು ಬಹಿರಂಗವಾಗಿಯೇ ಜೆಡಿಎಸ್ಗೆ ಆಹ್ವಾನ ನೀಡಿದರು.
ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, 15 ದಿನದ ಹಿಂದೆ ನನ್ನನ್ನು ಭೇಟಿ ಮಾಡಿದ್ದ ಯೋಗೇಶ್ವರ್, ಯಡಿಯೂರಪ್ಪ ನನ್ನನ್ನು ಕಡೆಗಣಿಸುತ್ತಿದ್ದಾರೆ. ಕಾಂಗ್ರೆಸ್ಗೆ ಬರುವೆ ಎಂದು ಹೇಳಿದ್ದ. ಈಗ ಉಲ್ಟಾ ಮಾತಾಡುತ್ತಿದ್ದಾನೆ ಎಂದು ಹಿಗ್ಗಾಮುಗ್ಗಾ ತರಾಟಗೆ ತೆಗೆದುಕೊಂಡರು.