

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ಸಮಾಧಾನದಲ್ಲಿದ್ದ ಕಾಂಗ್ರೆಸ್ಗೆ ನಿಧಾನವಾಗಿ ಬಂಡಾಯದ ಬಿಸಿ ತಟ್ಟಲಾರಂಭವಾಗಿದೆ. ಈ ಬೆಳವಣಿಗೆಯಿಂದ ಕೈ ನಾಯಕರಲ್ಲಿ ತಳಮಳ ಹೆಚ್ಚಾಗಿದ್ದು, ಬಂಡಾಯ ತಣಿಸಲು ಪ್ರಯತ್ನ ಆರಂಭಿಸಿದ್ದಾರೆ.
ಈ ಹಂತದಲ್ಲಿ ಸಮಾಧಾನಪಡಿಸದಿದ್ದರೆ ಮುಂದೆ ಪರಿಸ್ಥಿತಿ ಬಿಗಡಾಯಿಸಬಹುದು. ಎದುರಾಳಿಗಳು ಪರಿಸ್ಥಿತಿ ಲಾಭ ಪಡೆಯಬಹುದು ಹಾಗೂ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಅಡಚಣೆ ಉಂಟಾಗಬಹುದು ಎಂಬ ಅಂದಾಜಿನಲ್ಲಿ ಪರಿಸ್ಥಿತಿ ನಿಭಾಯಿಸಲು ಪಕ್ಷ ಕಾರ್ಯೋನ್ಮುಖವಾಗಿದೆ.
ಪಾವಗಡ ಹಾಲಿ ಕಾಂಗ್ರೆಸ್ ಶಾಸಕ ವೆಂಕಟರವಣಪ್ಪ ಪುತ್ರ ಎಚ್.ವಿ. ವೆಂಕಟೇಶ್ಗೆ ಪಕ್ಷದ ಟಿಕೆಟ್ ಘೋಷಣೆಯಾದ ಬೆನ್ನಲ್ಲೆ ಬಂಡಾಯ ಸ್ಪೋಟಗೊಂಡಿದೆ. ಪಕ್ಷದ ಮುಖಂಡರು ಸಭೆ ಸೇರಿ ಪಕ್ಷದ ತೀರ್ವನದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮಾಜಿ ಶಾಸಕ ಸೋಮ್ಲಾ ನಾಯ್ಕ ನೇತೃತ್ವದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗಾಯತ್ರಿ ಬಾಯಿ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಕೂಡ ಚರ್ಚೆ ನಡೆಸಿದ್ದಾರೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಚಂದ್ರಾ ಸಿಂಗ್ ಬಂಡಾಯ ಧ್ವಜ ಹಾರಿಸಿದ್ದಾರೆ. ಸೋಮವಾರ ಬೆಂಬಲಿಗರ ಸಭೆ ನಡೆಸಿದ ಅವರು, ಧರ್ಮಸಿಂಗ್ ಅಳಿಯ ಎಂಬುದನ್ನೇ ನೆಪವಾಗಿಟ್ಟುಕೊಂಡು ಟಿಕೆಟ್ ನಿರಾಕರಿಸಲಾಗುತ್ತಿದೆ. ಕೂರಲು, ನಿಲ್ಲಲು ಆಗದ ಖೇಣಿಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ. ಪಕ್ಷದ ಕಾರ್ಯಕರ್ತರ ಶಕ್ತಿ ತೋರಿಸಬೇಕಿದೆ. ಎಷ್ಟೇ ಒತ್ತಡ ಬಂದರೂ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ ಎಂದು ಘೋಷಿಸಿದ್ದಾರೆ.
ಕುಣಿಗಲ್ನಲ್ಲಿ ಹಾಲಿ ಶಾಸಕ ರಂಗನಾಥ್ ಅವರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಆದರೆ, ಮಾಜಿ ಶಾಸಕ ಹಾಗೂ ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಬಿ.ಬಿ. ರಾಮಸ್ವಾಮಿ ಪಕ್ಷದ ತೀರ್ವನಕ್ಕೆ ಆಕ್ಷೇಪ ಎತ್ತಿದ್ದಾರೆ. ಹಾಲಿ ಶಾಸಕರಿಗೆ ಸೋಲು ಎಂಬುದು ಸರ್ವೆಗಳಲ್ಲಿ ವರದಿ ಬಂದಿದ್ದರೂ ಅವಕಾಶ ನೀಡಲಾಗಿದೆ. ನಾನು ಬಂಡಾಯವಾಗಿ ಕಣಕ್ಕಿಳಿಯುವುದು ನಿಶ್ಚಿತ ಎಂದು ಘೋಷಿಸಿದ್ದಾರೆ.
ನೆಲಮಂಗಲದಲ್ಲಿ ಶ್ರೀನಿವಾಸಯ್ಯ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಟಿಕೆಟ್ ಆಕಾಂಕ್ಷಿಗಳು ಅಸಮಾಧಾನ ಹೊರಹಾಕಿದ್ದಾರೆ. ಏಕಾಏಕಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ, ಪಕ್ಷಕ್ಕೆ ದುಡಿದವರಿಗೆ ಅವಕಾಶ ಕೊಟ್ಟಿಲ್ಲ ಎಂದು ಮಾತುಗಳು ಕೇಳಿಬಂದಿವೆ. ಟಿಕೆಟ್ಗೆ ಅರ್ಜಿ ಹಾಕಿದವರನ್ನು ಕಡೆಗಣಿಸಿದ್ದು, ಅವರು ಪಕ್ಷ ಸಂಘಟನೆಗೆ ಖರ್ಚು ಮಾಡಿಕೊಂಡಿದ್ದು, ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಬಂಡಾಯ ಕಾಣಿಸದಿದ್ದರೂ, ಪಕ್ಷದಲ್ಲಿ ತಟಸ್ಥ ಧೋರಣೆ ಎದ್ದು ಕಾಣಿಸಿದೆ.
ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆ.ಷಡಕ್ಷರಿ ಅವರಿಗೆ ಪುನಃ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಇದರಿಂದ ಟಿಕೆಟ್ ಆಕಾಂಕ್ಷಿ ಶಶಿಧರ್ ಬಂಡಾಯ ಬಾವುಟ ಬೀಸಿದ್ದಾರೆ. ಅವರನ್ನು ತಣ್ಣಗಾಗಿಸುವ ಪ್ರಯತ್ನ ನಡೆದಿದೆಯಾದರೂ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹಾಗೆಯೇ ಶಿರಾ ಟಿಕೆಟ್ ಆಕಾಂಕ್ಷಿ ಕಾಡುಗೊಲ್ಲ ಸಮುದಾಯದ ಸಾಸಲು ಸತೀಶ್ ಸಿಡಿದಿದ್ದಾರೆ. ಅವರ ಮನವೊಲಿಕೆ ಪ್ರಯತ್ನ ನಡೆದಿದೆ. ಕಾಡುಗೊಲ್ಲ ಸಮುದಾಯ ಮಾತ್ರ ಅಸಮಾಧಾನಗೊಂಡಿದೆ.
ಟಿಕೆಟ್ ಆಕಾಂಕ್ಷಿಗಳೆಲ್ಲ ಪಕ್ಷದ ತೀರ್ವನದ ವಿರುದ್ಧ ಬೇಸರ ಹೊರಹಾಕಿದ್ದಾರೆ. ಪಕ್ಷದ ಸಮಾನ ಮನಸ್ಕರ ಸಭೆ ನಡೆದಿದ್ದು, ಅನ್ಯಾಯ ಸರಿಪಡಿಸಿ, ಕಾಂಗ್ರೆಸ್ ಉಳಿಸಿ ಎಂಬ ಘೋಷಣೆ ಕೂಡ ಮೊಳಗಿದೆ. ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಉಪಮಹಾಪೌರ ಬಿ.ಎಸ್.ಪುಟ್ಟರಾಜು, ಮನೋಹರ್, ರಘುವೀರ್ ಎಸ್ ಗೌಡ ಸೇರಿ ಪಾಲಿಕೆ ಮಾಜಿ ಸದಸ್ಯರು, ಕಾರ್ಯಕರ್ತರು ಒಟ್ಟಾಗಿ ಚರ್ಚೆ ನಡೆಸಿದ್ದಾರೆ. ಒಂದು ವಾರದಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಿ ಕಣಕ್ಕಿಳಿಯುವ ಬಗ್ಗೆ ಪುಟ್ಟರಾಜು ನಿರ್ಧರಿಸುವರು.
ದೊಡ್ಡಬಳ್ಳಾಪುರದಲ್ಲಿ ಹಾಲಿ ಶಾಸಕ ವೆಂಕಟರಮಣಯ್ಯ ಟಿಕೆಟ್ ಪಡೆದುಕೊಂಡಿದ್ದಾರೆ. ಆದರೆ, ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಆನಂದ ಕುಮಾರ್ ಸಿಟ್ಟಿಗೆದ್ದಿದ್ದು, ಸ್ವಾಭಿಮಾನಿ ಕಾಂಗ್ರೆಸ್ ಪಡೆ ಕೂಡ ಸೃಷ್ಟಿಯಾಗಿದ್ದು, ಪಕ್ಷದಲ್ಲಿ ಸ್ಪಷ್ಟ ಒಡಕು ಕಾಣಿಸಿದೆ. ಪಕ್ಷದಿಂದ ಶಿಸ್ತು ಕ್ರಮದ ಬಿಸಿ ಮುಟ್ಟಿಸಿದ್ದು, ಅಸಮಾಧಾನಿತರನ್ನು ಇನ್ನಷ್ಟು ಕೆರಳಿಸಿದೆ. ನಾವು ಸೋತರೂ ಅಧಿಕೃತ ಅಭ್ಯರ್ಥಿ ಗೆಲ್ಲಲು ಬಿಡೆವು ಎಂದು ಹಠ ತೊಟ್ಟಿದ್ದಾರೆ.
ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ದೇವನಹಳ್ಳಿ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದು, ಕಾಂಗ್ರೆಸ್ನಲ್ಲಿ ಸ್ಥಳೀಯ ಘಟಕ ಸಿಟ್ಟಾಗಿದೆ. ಅವರು ಹೆಸರು ಮುನ್ನೆಲೆಗೆ ಬಂದಾಗಲೇ ಬಹಿರಂಗ ಅಸಮಾಧಾನ ಹೊರಹಾಕಿದ್ದ ನಾಯಕರು ಈಗ ತಣ್ಣಗಿದ್ದಾರೆ. ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಹೊಸಕೋಟೆಯಲ್ಲೂ ಕೂಡ ಇದೇ ಪರಿಸ್ಥಿತಿ ಇದೆ.
ಸುಳ್ಯ ಕ್ಷೇತ್ರದಲ್ಲಿ ಹೊರಗಿನ ಅಭ್ಯರ್ಥಿ ಜಿಗಣಿ ಕೃಷ್ಣಪ್ಪ ಅವರಿಗೆ ಟಿಕೆಟ್ ಪ್ರಕಟಿಸಿರುವುದನ್ನು ವಿರೋಧಿಸಿ ಕಾರ್ಯ ಕರ್ತರು ಮಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ನಂದಕುಮಾರ್ಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಬಿಟ್ಟು ಹೋಗಿ ಬಿಜೆಪಿಯಲ್ಲಿ ಸಚಿವರಾಗಿರುವ ಬೈರತಿ ಬಸವರಾಜ್ ಹಾಗೂ ಎಸ್.ಟಿ. ಸೋಮಶೇಖರ್, ಮುನಿರತ್ನ ವೈಯಕ್ತಿಕ ವರ್ಚಸ್ಸಿನಿಂದ ಗೆಲ್ಲುವ ಸಾಮರ್ಥ್ಯ ಹೊಂದಿದವರಾಗಿದ್ದು, ಅವರನ್ನು ಪುನಃ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆದಿದೆ.
ಮೊದಲ ಪಟ್ಟಿಯಲ್ಲಿ ಯಾವುದಾದರೂ ಗೊಂದಲ ಕಾಣುತ್ತಿದೆಯೆ? ಪಕ್ಷದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಮಾರ್ಚ್ 30ರ ನಂತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು.
| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ