

"ನನಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು ಎಂದು ನಮ್ಮ ಪೋಷಕರು ಬೆಂಗಳೂರಿನಲ್ಲಿ ಎನ್ ಪಿಎಸ್ ಶಾಲೆಗೆ ಸೇರಿಸಿದರು. ನನ್ನ ತುಂಟಾಟ ಹೆಚ್ಚಾಗಿ ನನಗೆ ಅವರು ಟಿಸಿ ಕೊಟ್ಟು ಕಳುಹಿಸಿದರು'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್(DK Shivakumar) ಬಾಲ್ಯದ ನೆನಪನ್ನು ಮೆಲುಕು ಹಾಕಿದರು.
ಕನಕಪುರದಲ್ಲಿ ಭಾನುವಾರ ಮಾಜಿ ಶಾಸಕ ಎಸ್ ಕರಿಯಪ್ಪ ಅವರ 125 ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತ್ತೆ ಅದೇ ಶಾಲೆಗೆ ಸೇರಿಸಬೇಕು ಎಂದು ಶಾಸಕರಾಗಿದ್ದ ಕರಿಯಪ್ಪನವರ ಬಳಿಗೆ ನನ್ನನ್ನು ಕರೆತಂದರು. ನಂತರ ಅವರು ಆಗಿನ ಶಿಕ್ಷಣ ಸಚಿವ ಮಲ್ಲಿಕಾರ್ಜುನ ಸ್ವಾಮಿ ಅವರ ಬಳಿಗೆ ಕರೆದುಕೊಂಡು ಹೋದರು. ಅವರ ಮಾತಿಗೂ ಶಾಲೆಯ ಪ್ರಾಂಶುಪಾಲರಾದ ಗೋಪಾಲಕೃಷ್ಣ ಅವರು ನನಗೆ ಸೀಟು ಕೊಡಲಿಲ್ಲ. ನಂತರ ನಾವು ಸಿಎಂ ದೇವರಾಜ ಅರಸು ಅವರ ಮನೆಗೆ ಹೋದೆವು. ಅವರು ನಮಗೆ ವಿದ್ಯಾವರ್ಧಕ ಶಾಲೆಯಲ್ಲಿ ಸೀಟು ಕೊಡಿಸಿದರು. ಹೀಗೆ ನನ್ನ ಬದುಕಿನಲ್ಲಿ ಬದಲಾವಣೆ ಪಡೆಯಲು ಕರಿಯಪ್ಪನವರು ಕೂಡ ಪಾತ್ರವಹಿಸಿದ್ದರು" ಎಂದು ತಿಳಿಸಿದರು.
"ಈ ಸಮಯದಲ್ಲಿ ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿಗಳ ಮನೆ ನೋಡಿ ನಾನು ಅವರಂತೆ ಶಾಸಕನಾಗಬೇಕು ಎಂದು ರಾಜಕೀಯಕ್ಕೆ ಬಂದೆ. ಅಲ್ಲಿಂದ ಇಲ್ಲಿಯವರೆಗೆ ಬಂದಿದ್ದು, ನೀವೆಲ್ಲರೂ ನನ್ನ ಬೆಳೆಸಿದ್ದೀರಿ. ಮುಂದೆ ಏನೋ ಗೊತ್ತಿಲ್ಲ. ಕರಿಯಪ್ಪನವರು ನಾಲ್ಕು ಬಾರಿ ಶಾಸಕರಾಗಿದ್ದರು. ನೀವು ನನಗೆ ಎಂಟು ಬಾರಿ ಗೆಲ್ಲಿಸಿದ್ದೀರಿ. ಈ ಶಾಲಾ ಆಡಳಿತ ಮಂಡಳಿ ಶಾಲೆಗೆ ಹೊಸ ರೂಪ ನೀಡುತ್ತಿದೆ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ರಾಜಕಾರಣಿ" ಎಂದರು.