ತುಂಬಾ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಬಾರದಿತ್ತು; ಎಲ್ಲರೂ ನಿಮ್ಮ ಆರೋಗ್ಯದತ್ತ ಗಮನ‌ಹರಿಸಿ: ಡಿ.ಕೆ. ಶಿವಕುಮಾರ್​​

Untitled design - 2023-08-09T135444.348
Published on

ಬೆಂಗಳೂರು: ಕನ್ನಡ ಚಿತ್ರರಂಗದ ನಟ ವಿಜಯ್​ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹಠಾತ್​ ಹೃದಯಾಘಾತದಿಂದ ಭಾನುವಾರ (ಆಗಸ್ಟ್​ 06) ರಾತ್ರಿ ವಿದೇಶದಲ್ಲಿ ಮೃತಪಟ್ಟಿದ್ದು, ಇಂದು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಮಲ್ಲೇಶ್ವರದಲ್ಲಿ ಅಂತಿಮ ದರ್ಶನಕ್ಕೆ ಎಂದು ಇರಿಸಲಾಗಿದೆ. ಈ ವೇಳೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್​, ಘಟನೆಯನ್ನು ನೆನೆದು ಭಾವುಕರಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ, "ಒಂದು ವಾರದ ಹಿಂದೆಯಷ್ಟೇ ದಂಪತಿ ನನ್ನನ್ನು ಭೇಟಿ ಮಾಡಿದ್ದರು. ಸೈಟ್ ವಿಚಾರವಾಗಿ ಹಾಗೂ ನನಗೆ ಅಭಿನಂದನೆ ಸಲ್ಲಿಸಲು ಆಗಮಿಸಿದ್ದರು. ಸ್ಪಂದನಾ ತುಂಬಾ ಆರೋಗ್ಯಕರವಾಗಿಯೇ ಇದ್ದರು. ಅವರ ಅಂತಿಮ ದರ್ಶನಕ್ಕೆ ಬರುತ್ತಿರುವ ಈ‌ ಅಭಿಮಾನದ ಸಾಗರವನ್ನು ನೋಡಿದರೆ ತಿಳಿಯುತ್ತದೆ, ಜನರು ಅವರನ್ನು ಎಷ್ಟು ಇಷ್ಟ ಪಡುತ್ತಿದ್ದರು ಎಂಬುದು. ತುಂಬಾ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಬಾರದಿತ್ತು" ಎಂದು ಹೇಳಿದರು.

"ವಿಜಯ ರಾಘವೇಂದ್ರ ಅವರ ಕುಟುಂಬದ ಸದಸ್ಯರೆಲ್ಲರೂ ನನಗೆ ಬಹಳ ಆತ್ಮೀಯರು. ಸ್ಪಂದನಾ ಕುಟುಂಬದವರಿಗೆ, ಪತಿಗೆ ಮತ್ತು ಅಭಿಮಾನಿಗಳಿಗೆ ಭಗವಂತ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಆಶಿಸುತ್ತೇನೆ. ಪ್ರತಿಯೊಬ್ಬರು ನಿಮ್ಮ ಆರೋಗ್ಯದ ಬಗ್ಗೆ ಗಮನ‌ಕೊಡಿ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net