

ಬೆಂಗಳೂರು:
ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ ಪ್ರಾಬಲ್ಯ ಇರುವ ಕಡೆ ತಮ್ಮ ಅಭ್ಯರ್ಥಿಗಳು ಸೋಲುಂಡ ಬಗ್ಗೆ ಅವಲೋಕನ ನಡೆಸಲು ಗುರುವಾರ ತಾವು ನಡೆಸಿದ ಒಕ್ಕಲಿಗ ಸಚಿವರು, ಶಾಸಕರು, ಅಭ್ಯರ್ಥಿಗಳ ಸಭೆಯ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಯಾಕೆ ಈ ರೀತಿಯ ವೋಟಿಂಗ್ ಆಗಿದೆ ಎಂಬುದರ ಬಗ್ಗೆ ಚರ್ಚೆ ಮಾಡಬೇಕಿತ್ತು, ಸಭೆ ನಡೆಸಿದ್ದೇವೆ. ಸೋತಿದ್ದೇವೆ ಒಪ್ಪಿಕೊಳ್ಳುತ್ತೇವೆ. ರಾಜಕಾರಣದಲ್ಲಿ ಇದೆಲ್ಲಾ ನಡೆಯುತ್ತದೆ. ಚಲುವರಾಯಸ್ವಾಮಿ, ಬಾಲಕೃಷ್ಣ, ಇವರೆಲ್ಲರೂ ಹಿಂದೆ ಸೋತಿದ್ದರು. ಪುನಃ ವಾಪಸ್ ಅವರು ಗೆದ್ದಿದ್ದಾರೆ. ಈಗಿನ ಸೋಲು ಸಹ ಶಾಶ್ವತ ಅಲ್ಲ ಎಂದರು.
ಸೋಲು ಗೆಲುವು ಇದ್ದೇ ಇರುತ್ತೆ, 6 ತಿಂಗಳಲ್ಲೇ ಜನರ ಭಾವನೆ ಬದಲಾವಣೆ ಆಗುತ್ತದೆ ಎಂದ ಅವರು ನಾವು ಹಿಂದೆ ಒಂದೇ ಸೀಟ್ ಗೆದ್ದಿದ್ದೆವು, ಈ ಬಾರಿ 9 ಕಡೆ ಗೆದ್ದಿದ್ದೇವೆ. ನಾಲ್ಕೈದು ಸ್ಥಾನ ಕಡಿಮೆ ಆಗಿದೆ. ಕಾರ್ಯಕರ್ತರು ಯಾರು ಚಿಂತೆ ಮಾಡುವುದು ಬೇಡ ಎಂದು ಹೇಳಿದರು.
ನನಗೆ ನಂಬಿಕೆ ಇದೆ 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಬರುತ್ತದೆ. ನಾನು ಸಿದ್ದರಾಮಯ್ಯ ಒಟ್ಟಿಗೆ ದುಡಿದು ಈ ಸರ್ಕಾರವನ್ನು ಭದ್ರಗೊಳಿಸುತ್ತೇವೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.