

ಬೆಂಗಳೂರು: ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಸರ್ಕಾರ ಉಚಿತವಾಗಿ ನೀಡುವ ಪದಾರ್ಥಗಳ ಪೊಟ್ಟಣದಲ್ಲಿ ಬಿಜೆಪಿ ಸಿಂಬಲ್ ಬಳಕೆ ಮಾಡುತ್ತಿದ್ದಾರೆ. ಬಿಜೆಪಿಯರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ನ ಮಹಿಳಾ ಘಟಕ ಆರೋಪಿಸಿತು.
ಆನಂದ್ ರಾವ್ ಸರ್ಕಲ್ ಬಳಿ ಇರುವ ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಘಟಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಮೋಟಮ್ಮ, ಜಯಮಾಲ, ಉಮಾಶ್ರೀ, ರಾಣಿ ಸತೀಶ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ವಲಸೆ ಕಾರ್ಮಿಕರಿಗೆ 3 ದಿನ ಫ್ರೀ ಬಸ್
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್ಐಆರ್ ದಾಖಲಾಗಿದೆ. ನೈತಿಕ ಹೊಣೆ ಹೊತ್ತು ಯಡಿಯೂರಪ್ಪ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ರಾಜೀನಾಮೆ ನೀಡಬೇಕು. ಸರ್ಕಾರ ಕ್ರಮ ಕೈಗೊಳ್ಳದೆ ಇದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ವೇಳೆ ಕಣ್ಣು, ಮೂಗುಗಳಿಗೆ ಬಟ್ಟೆ ಕಟ್ಟಿಕೊಂಡು ಹೈಡ್ರಾಮಾ ಸೃಷ್ಟಿಸಿದರು.
ನಾನು ಗಾಂಧಾರಿ ರೀತಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತೇನೆ ಎನ್ನುತ್ತ ಇಡೀ ಮುಖಕ್ಕೆ ಬಿಳಿ ಕರ್ಚಿಫ್ ಕಟ್ಟಿಕೊಂಡು ಮಾಧ್ಯಮಗಳಿಗೆ ಪೋಸ್ ಕೊಟ್ಟರು.
ಸುದ್ದಿಗೋಷ್ಠಿಯಂತೂ ಅಕ್ಷರಶಃ ಜಾತ್ರೆಯಾಗಿತ್ತು. ಇಲ್ಲೂ ಸಹ ಸಾಮಾಜಿಕ ಅಂತರ ನಿಯಮ ಪಾಲನೆಯನ್ನು ಕಾಂಗ್ರೆಸ್ ನಾಯಕರು ಮಾಡಲಿಲ್ಲ. ಅಲ್ಲಿಂದ ಮಹಿಳಾ ಘಟಕ ಸಿಎಂ ಕಚೇರಿಗೆ ಮುತ್ತಿಗೆ ಹಾಕಲು ಕೃಷ್ಣಾಕ್ಕೆ ಮೆರವಣಿಗೆ ಹೊರಟಿತು.
ಇದಕ್ಕೂ ಮೊದಲು ಬಸ್ಗಳ ಮೂಲಕ ತಮ್ಮ ಊರುಗಳಿಗೆ ತೆರಳುತ್ತಿರುವ ಕೂಲಿ ಕಾರ್ಮಿಕರನ್ನು ಭೇಟಿಯಾಗಲು ಕಾಂಗ್ರೆಸ್ ನಿಯೋಗ ಮೆಜೆಸ್ಟಿಕ್ಗೆ ತೆರಳಿತ್ತು.
ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ಅಜೇಯ್ ಸಿಂಗ್, ಬೈರತಿ ಸುರೇಶ್, ನಾರಯಣ ಸ್ವಾಮಿ ಮತ್ತಿತರರು ಮೆಜೆಸ್ಟಿಕ್ಗೆ ತೆರಳಿ ಕೂಲಿ ಕಾರ್ಮಿಕರ ಬಳಿ ಮಾತುಕತೆ ನಡೆಸಿದರು.
ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರರು ಬಸ್ ಹತ್ತಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಬಸ್ಗಳನ್ನೂ ವೀಕ್ಷಣೆ ಮಾಡಿದರು. ಈ ವೇಳೆ ಸಾಮಾಜಿಕ ಅಂತರ ಪಾಲನಾ ನಿಯಮ ಸಂಪೂರ್ಣ ಉಲ್ಲಂಘನೆಯಾಗಿದೆ.