

ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಬಳಿಯ ಮುನೇಶ್ವರಸ್ವಾಮಿ ಬೆಟ್ಟದಲ್ಲಿ (ಕಪಾಲಬೆಟ್ಟ) ಏಸುಕ್ರಿಸ್ತನ ಬೃಹತ್ ಪ್ರತಿಮೆ ನಿರ್ವಣಕ್ಕೆ ಚಾಲನೆ ದೊರೆತ ನಂತರ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ವಿರುದ್ಧ ಬೊಬ್ಬಿರಿದಿದ್ದ ರಾಜ್ಯ ಸರ್ಕಾರ, ಇದೀಗ ಅವರ ಮುಂದೆ ಮಂಡಿಯೂರಿತೆ ಎಂಬ ಪ್ರಶ್ನೆ ಉದ್ಭವಿಸಿದೆ. ರಾಜ್ಯ ಸರ್ಕಾರ ಬಹುತೇಕ ಈ ವಿಚಾರವನ್ನು ಕೈಬಿಟ್ಟಂತೆ ಕಾಣುತ್ತಿದೆ.
ಡಿ.25ರಂದು ಡಿ.ಕೆ. ಶಿವಕುಮಾರ್ ವಿಶ್ವದಲ್ಲೇ ಅತಿ ಎತ್ತರದ ಏಸು ಪ್ರತಿಮೆ ನಿರ್ವಣಕ್ಕೆ ಚಾಲನೆ ನೀಡಿದ್ದರು. ಅಲ್ಲದೆ, ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ಗೆ 10 ಎಕರೆ ಗೋಮಾಳ ಮಂಜೂರು ಮಾಡಿಸಿಕೊಟ್ಟಿದ್ದರು. ಜಮೀನಿಗೆ ಸರ್ಕಾರ ನಿಗದಿ ಮಾಡಿದ್ದ ಮೊತ್ತವನ್ನು ಸ್ವತಃ ಭರಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ವಿವಾದ ಭುಗಿಲೇಳುತ್ತಿದ್ದಂತೆ ಸರ್ಕಾರ, ಸಚಿವರು ಮತ್ತು ಹಿಂದುಪರ ಸಂಘಟನೆಗಳು ಡಿಕೆಶಿ ವಿರುದ್ಧ ಹರಿಹಾಯ್ದು ಪ್ರತಿಮೆ ನಿರ್ವಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದವು.
ವಿಪರ್ಯಾಸವೆಂದರೆ, ಅಂದು ತರಾತುರಿಯಲ್ಲಿ ಸ್ಥಳೀಯ ಬೆಳವಣಿಗೆ ಮತ್ತು ಜಮೀನು ಹಸ್ತಾಂತರ ಸಂಬಂಧ ವರದಿ ನೀಡಬೇಕು ಎಂದು ಕೋರಿದ್ದ ಕಂದಾಯ ಸಚಿವ ಆರ್. ಅಶೋಕ್ ಈಗ ವರದಿ ಪಡೆಯಲು ನಿರುತ್ಸಾಹ ತೋರುತ್ತಿದ್ದಾರೆ.
ಮೌನಕ್ಕೆ ಶರಣು?: ವಿವಿಧ ಹಿಂದುಪರ ಸಂಘಟನೆಗಳ ನೇತೃತ್ವದಲ್ಲಿ ಕನಕಪುರದಲ್ಲಿ ಜ.13ರಂದು ‘ಕನಕಪುರ ಚಲೋ’ ಕಾರ್ಯಕ್ರಮವೂ ನಡೆಯಿತು. ಈ ವೇಳೆ ಸಂಘಟನೆಗಳ ಮುಖಂಡರು ಮುನೇಶ್ವರಸ್ವಾಮಿ ಬೆಟ್ಟ ಉಳಿಸುವ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಜ.25ರ ಗಡುವು ನಿಗದಿಪಡಿಸಿದ್ದರು. ಆದರೆ, ಗಡುವು ಮುಗಿದು ವಾರ ಕಳೆದರೂ ಸರ್ಕಾರ ಜಿಲ್ಲಾಡಳಿತದಿಂದ ವರದಿ ಪಡೆದಿಲ್ಲ. ಈ ನಡೆ ಅನುಮಾನಕ್ಕೆ ಕಾರಣವಾಗಿದೆ.
ವಿಳಂಬ ಮಾಡಲು ನಿರ್ದೇಶನ?
ಲಭ್ಯ ಮಾಹಿತಿ ಪ್ರಕಾರ ಕನಕಪುರ ತಹಸೀಲ್ದಾರ್ ಈಗಾಗಲೇ ಸ್ಥಳ ಪರಿಶೀಲನಾ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಅಲ್ಲದೆ, ಈಗಿನ ಕಪಾಲಬೆಟ್ಟದಲ್ಲಿ ಈಗಾಗಲೇ ಪ್ರತಿಮೆ ನಿರ್ಮಾಣ ಕಾಮಗಾರಿಯೂ ಸ್ಥಗಿತಗೊಂಡಿದೆ. ಜಿಲ್ಲಾಡಳಿತಕ್ಕೆ ಸಲ್ಲಿಕೆಯಾದ ವರದಿ ಸರ್ಕಾರದ ಕೈಸೇರದಿರುವುದರ ಹಿಂದೆ, ‘ಅದಕ್ಕೇನೂ ಆತುರ ಇಲ್ಲ, ವಿಳಂಬ ಮಾಡಿ’ ಎನ್ನುವ ಸರ್ಕಾರದ ನಿರ್ದೇಶನವೇ ಕಾರಣ ಎಂಬುದು ಮೂಲಗಳು ತಿಳಿಸಿವೆ.
ಡಿಕೆಶಿ ಶಕ್ತಿ ಕೆಲಸ ಮಾಡಿತೇ?
ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಅವರ ಶಕ್ತಿ ಸರ್ಕಾರವನ್ನು ಮೌನವಾಗುವಂತೆ ಮಾಡಿದೆಯೇ ಎನ್ನುವ ಚರ್ಚೆಯೂ ಆರಂಭಗೊಂಡಿದೆ. ಸರ್ಕಾರ ಯಾವುದೇ ಇರಲಿ ಎಲ್ಲರೊಟ್ಟಿಗೂ ತಮ್ಮದೇ ಆದ ಬಾಂಧವ್ಯ ಹೊಂದಿರುವ ಶಿವಕುಮಾರ್, ಆರಂಭದಲ್ಲಿ ಎದುರಾದ ವಿರೋಧದ ನಡುವೆಯೂ ಸರ್ಕಾರದ ಕೆಲವರನ್ನು ಸಮಾಧಾನ ಮಾಡಿ ಪರಿಸ್ಥಿತಿ ತಣ್ಣಗಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಇದರಿಂದಾಗಿಯೇ ಸರ್ಕಾರ ಮೌನಕ್ಕೆ ಶರಣಾಗಿದೆ ಎಂದು ಹೇಳಲಾಗುತ್ತಿದೆ.
| ಗಂಗಾಧರ್ ಬೈರಾಪಟ್ಟಣ