ಚನ್ನಪಟ್ಟಣ ಉಪಚುನಾವಣೆಗೆ ಡಿಕೆಶಿ ಕ್ಯಾಂಡಿಡೇಟ್​?​; ತಮ್ಮ ಸ್ಪರ್ಧೆ ಕುರಿತು ಪರೋಕ್ಷ ಸುಳಿವು ನೀಡಿದ ಡಿಸಿಎಂ

DK Brothers
Published on

ಚನ್ನಪಟ್ಟಣ: 18ನೇ ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್​ 04ರಂದು ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಫಲ ನೀಡಿದ್ದು, 17+2 ಸ್ಥಾನಗಳನ್ನು ಗೆದ್ದುಕೊಂಡಿವೆ. ನಿರೀಕ್ಷಯಂತೆ ಮಂಡ್ಯದಲ್ಲಿ ಮಾಜಿ ಸಿಎಂ ಎಚ್​.ಡಿ. ಕುಮಾರ್​ಸ್ವಾಮಿ ಭರ್ಜರಿ ಜಯ ಗಳಿಸಿದ್ದು, ರಾಜ್ಯ ರಾಜಕಾರಣದಿಂದ ಕೇಂದ್ರದ ಕಡೆ ಮುಖ ಮಾಡಿದ್ದಾರೆ. ಚನ್ನಪಟ್ಟಣ್ಣ ಕ್ಷೇತ್ರದ ಶಾಸಕರಾಗಿದ್ದ ಅವರು ಇದೀಗ ಸಂಸದರಾಗಿ ಆಯ್ಕೆಯಾಗಿದ್ದು, ಎಂಎಲ್​ಎ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇತ್ತ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಚನ್ನಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲುಂಡ ಡಿ.ಕೆ. ಸುರೇಶ್​ ಚನ್ನಪಟ್ಟಣ್ಣದ ಕಾಂಗ್ರೆಸ್​ ಅಭ್ಯರ್ಥಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಚನ್ನಪಟ್ಟಣ ನನ್ನ ಹೃದಯದಲ್ಲಿದೆ. ಕನಕಪುರದ ಸಾತನೂರಿನ ಒಂದು ಭಾಗ ಚನ್ನಪಟ್ಟಣದಲ್ಲಿದೆ. ನನಗೆ ರಾಜಕೀಯವಾಗಿ ಜೀವ ಕೊಟ್ಟ ತಾಲ್ಲೂಕು ಇದು. ಐ ಲವ್​ ಅಂಡ್​ ವಾಂಟ್ ಟು ಡೆವೆಲಪ್ ಚನ್ನಪಟ್ಟಣ ಈ ಮೂಲಕವಾದರು ಇಲ್ಲಿನ ಜನರ ಋಣ ತೀರಿಸಬೇಕು ಎಂದು ಹೇಳಿದ್ದಾರೆ.

ಚನ್ನಪಟ್ಟಣದಿಂದ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಚನ್ನಪಟ್ಟಣ ನನ್ನ ಹೃದಯದಲ್ಲಿದೆ. ಕ್ಷೇತ್ರದ ಜನರ ಮೇಲೆ ನನಗೆ ಪ್ರೀತಿಯಿದೆ. ಆ ಜನರ ಋಣ ತೀರಿಸಬೇಕು. ಕನಕಪುರಕ್ಕಿಂತ ಹೆಚ್ಚಿನ ಅಭಿವೃದ್ಧಿ ಮಾಡುತ್ತೇನೆ. ಇವತ್ತು ಅಲ್ಲಿನ ದೇವಸ್ಥಾನಗಳ ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ. ಮತದಾರರ ಭೇಟಿ ಮಾಡಿ ಮಾತನಾಡುತ್ತೇನೆ. ಮತದಾರರು ನನ್ನ ಬಗ್ಗೆ ಒಲವು ಇಟ್ಟುಕೊಂಡರೆ ವಿಧಿನೆ ಇಲ್ಲಾ. ನಮ್ಮ ಪಕ್ಷದ ನಾಯಕರು, ಮತದಾರರು ಏನು ಹೇಳ್ತಾರೆ ಅದನ್ನ ಕೇಳುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸ್ಪರ್ಧೆಯ ಸುಳಿವು ನೀಡಿದ್ದಾರೆ. ಉಪಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್​​ ಕುಟುಂಬದ ಸದಸ್ಯರು ಅಭ್ಯರ್ಥಿಯಾಗಲಿದಗ್ದು, ಯಾರಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net