ರಾಜಕಾರಣ ಮಾಡಲ್ಲ, ಸ್ಕೋರ್ ಬೇಕಾಗಿಲ್ಲ: ರೌದ್ರಾವತಾರ ತಾಳುವೆ, ಎಲ್ಲ ಬಯಲಿಗಿಡುವುದಾಗಿ ಡಿಕೆಶಿ ಎಚ್ಚರಿಕೆ

DKS
Published on

ಬೆಂಗಳೂರು: ಕರೊನಾವೈರಸ್ ಸಂಕಷ್ಟ ಕಾಲದಲ್ಲಿ ರಾಜಕಾರಣ ಮಾಡಲು ಬಯಸಲ್ಲ, ಸ್ಕೋರ್ ಕೂಡ ಬೇಕಾಗಿಲ್ಲ. ರಾಜ್ಯದ ಜನರ ಹಸಿವು ನೀಗಿಸಿ, ಆರೋಗ್ಯ ರಕ್ಷಿಸುವುದು ಮುಖ್ಯವಾಗಿದೆ. ಕಾಂಗ್ರೆಸ್ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸರ್ಕಾರಕ್ಕೆ ಬೆಂಬಲ, ಸಹಕಾರ ನೀಡಲು ಬದ್ಧ. ಇದೆಲ್ಲ ಮುಗಿಯಲಿ, ರೌದ್ರಾವತಾರ ತಾಳುವೆ. ಎಲ್ಲವನ್ನೂ ಎಕ್ಸ್​ಪೋಸ್ ಮಾಡುವೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಡಕ್ ನುಡಿಗಳಿವು. ದಿಗ್ವಿಜಯ ನ್ಯೂಸ್ 24ಗಿ7 ಹಾಗೂ ವಿಜಯವಾಣಿ ಏರ್ಪಡಿಸಿದ್ದ ಫೋನ್​ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ಜಾತಿ, ಮತ, ರಾಜಕೀಯ ಪಕ್ಷದ್ದಲ್ಲ, ಮಾನವ ಕುಲದ ರಕ್ಷಣೆ ಹಾಗೂ ಭವಿಷ್ಯದ ವಿಷಯವಾಗಿದೆ. ಹೀಗಾಗಿ ವಿಭಿನ್ನ ಅಭಿಪ್ರಾಯಗಳಿದ್ದರೂ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದರು.

ಕೇಂದ್ರ ಸರ್ಕಾರ ವಿಫಲ: ಅತ್ಯಾಧುನಿಕ ತಂತ್ರಜ್ಞಾನ, ಕ್ಷಣಾರ್ಧದಲ್ಲಿ ಮಾಹಿತಿ ಕೈಗೆಟುಕುವ ಕಾಲವಿದು. ಆದರೆ, ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವ ವಿಷಯದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಫೆಬ್ರವರಿಯಲ್ಲಿ ಈ ಕುರಿತು ರಾಹುಲ್ ಗಾಂಧಿ ಟ್ವೀಟ್ ಮಾಡಿ ಗಂಭೀರವಾಗಿ ಪರಿಗಣಿಸುವಂತೆ ಎಚ್ಚರಿಸಿದ್ದರು. ಮೋದಿ ಸಚಿವ ಸಂಪುಟದ ಕೆಲ ಸಹೋದ್ಯೋಗಿಗಳು ಹಾಸ್ಯ ಮಾಡಿದರು. ಜನರೂ ನಕ್ಕರು. ತಜ್ಞರು ಮಾತ್ರ ಈ ಸಲಹೆ ಪರಿಗಣಿಸಲು ಹೇಳಿದರೂ ಕೇಂದ್ರ ಎಚ್ಚೆತ್ತುಕೊಳ್ಳಲಿಲ್ಲ. ಈಗಲೂ ತಪ್ಪೊಪ್ಪಿಕೊಂಡಿಲ್ಲ. ಇದೀಗ ಕಾಲ ಎಲ್ಲವನ್ನು ನಿರ್ಣಯಿಸಿದೆ. ಅಮೆರಿಕದಂತಹ ದೇಶಕ್ಕೆ ಭವಿಷ್ಯದ ಬಗ್ಗೆ ಭಯ ಹುಟ್ಟಿಕೊಂಡಿದೆ. ವಿಶ್ವಕ್ಕೆ ದೊಡ್ಡ ವಿಪತ್ತು ಎದುರಾಗಿದೆ ಎಂದು ಡಿಕೆಶಿ ಕಳವಳ ವ್ಯಕ್ತಪಡಿಸಿದರು.

ಪ್ರಸಾದದಂತೆ ಸ್ವೀಕಾರ: ಕೇಂದ್ರ ಸರ್ಕಾರದ ವೈಫಲ್ಯ, ವಿಭಿನ್ನ ಅಭಿಪ್ರಾಯಗಳ ನಡುವೆಯೂ ಜನರ ಹಿತದೃಷ್ಟಿಯಿಂದ ಪ್ರಧಾನಿ ಹೇಳಿದ್ದನ್ನೆಲ್ಲ ಪ್ರಸಾದದಂತೆ ಸ್ವೀಕರಿಸಿದ್ದೇವೆ. ಕೊನೆಗೂ ಎಚ್ಚೆತ್ತು ಪ್ರತಿಪಕ್ಷ ಕಾಂಗ್ರೆಸ್ ಸಲಹೆ ಪರಿಗಣಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲೆಂದು ಪ್ರಧಾನಿ ಸರ್ವಪಕ್ಷ ಸಭೆ ಕರೆದರು. ಅದೇ ರೀತಿ, ತಜ್ಞರು, ವೈದ್ಯರು ಹಾಗೂ ವಿಜ್ಞಾನಿಗಳ ಸಲಹೆಗಳಿಗೆ ಕೇಂದ್ರ ಕಿವಿಗೊಡಬೇಕು. ಈಗಾಗಲೆ ಘೋಷಿಸಿದಂತೆ ಪ್ಯಾಕೇಜ್​ಗಳನ್ನು ಅನುಷ್ಠಾನಕ್ಕೆ ತಂದು ನುಡಿದಂತೆ ನಡೆಯಬೇಕು. ಇಷ್ಟನ್ನೇ ಕಾಂಗ್ರೆಸ್ ಬಯಸುವುದು ಎಂದರು.

ವಚನಕ್ಕೆ ಬದ್ಧ: ರಾಜ್ಯ ಸರ್ಕಾರ ಕೈಗೊಂಡಿರುವ ಎಲ್ಲ ಕ್ರಮಗಳು ತೃಪ್ತಿಕರವಾಗಿಲ್ಲ. ಫೋನ್​ಇನ್ ಮೂಲಕ ಜನರು ಕೇಳುತ್ತಿರುವ ಪ್ರಶ್ನೆಗಳು, ಅಸಮಾಧಾನ, ದೂರುಗಳು ಎಲ್ಲವನ್ನೂ ಹೇಳುತ್ತವೆ. ಆದರೂ, ಬೆಂಬಲ ನೀಡುತ್ತೇವೆ ಎಂಬ ವಚನಕ್ಕೆ ಪಕ್ಷ ಬದ್ಧವಾಗಿದೆ. ಪ್ರತಿ ಗ್ರಾಪಂನಲ್ಲಿ 5 ಕೋಟಿ ರೂ. ಮೊತ್ತದ ವೈಯಕ್ತಿಕ ಅಥವಾ 5 ಜನರಿಗೆ ಸೀಮಿತ ಕಾಮಗಾರಿ ಕೈಗೆತ್ತಿಕೊಂಡರೆ ಪ್ರತಿಯೊಬ್ಬ ಕೂಲಿ ಕಾರ್ವಿುಕನ ಜೇಬಿಗೆ ಮಾಸಿಕ 10 ಸಾವಿರ ರೂ. ಆದಾಯ ಸಿಗಲಿದೆ, ಸಾರ್ವಜನಿಕ ಆಸ್ತಿ ಸೃಜನೆಯಾಗುತ್ತದೆ ಎನ್ನುವುದು ಸೇರಿ ಹಲವು ಸಲಹೆಗಳನ್ನು ನೀಡಲಾಗಿದೆ ಎಂದು ಡಿಕೆಶಿ ವಿವರಿಸಿದರು.

ಮುಂದಿನದು ಕಾದು ನೋಡಿ: ಸಂಕಷ್ಟವೆಲ್ಲ ಕಳೆಯಲಿ, ಸರ್ಕಾರದ ಬಣ್ಣ ಬಯಲು ಮಾಡುವೆ. ರೌದ್ರಾವತಾರ ತಾಳುವೆ ಎಂದರೆ ಜನರು ನೋವುಗಳನ್ನು ಬಿಚ್ಚಿಡುವೆ. ಕಿಟ್, ಮಾಸ್ಕ್, ಪಡಿತರ, ಪೊಲೀಸರ ಪಕ್ಷಪಾತ, ಪಾಸ್ ದುರ್ಬಳಕೆ ಹೀಗೆ ಎಲ್ಲದರಲ್ಲೂ ಏನೇನು ನಡೆದಿದೆ ಎಂಬುದಕ್ಕೆ ಪುರಾವೆ ಸಂಗ್ರಹಿಸಿದ್ದು, ಸೂಕ್ತ ಸಂದರ್ಭದಲ್ಲಿ ಬಹಿರಂಗಗೊಳಿಸುವೆ ಎಂದು ಗುಡುಗಿದರು. ಸರ್ಕಾರದ ಪಡಿತರ ಪಾಕೆಟ್​ಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಫೋಟೋ ಮುದ್ರಿಸಿ ಹಂಚಿರುವ ಬಗ್ಗೆ ಪುರಾವೆಗಳಿವೆ. ಮೋದಿ, ನಿರ್ಮಲ ಸೀತಾರಾಮನ್ ದುಡ್ಡು ಎಂದು ಕೆಲವರು ಹೇಳಿಕೊಂಡು ತಿರುಗಾಡಿದ ವಿಡಿಯೋಗಳಿವೆ. ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ ಸಹಿತ ಕೆಲವರು ಏನೆಲ್ಲ ಮಾತನಾಡಿದ್ದಾರೆ ಗೊತ್ತಿದೆ. ಮುಖ್ಯ ಕಾರ್ಯದರ್ಶಿಗೆ ಎಲ್ಲ ಮಾಹಿತಿ ಕೊಟ್ಟಿದ್ದು, ಸಂದರ್ಭದ ದುರ್ಲಾಭ ಪಡೆದು ರಾಜಕಾರಣ ಮಾಡು ತ್ತಿರುವವರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಾಂಗ್ರೆಸ್​ನ ಸೈನ್ಯ ಮುಂದೇನು ಮಾಡಲಿದೆ ಎನ್ನುವುದು ಕಾದುನೋಡಿ ಎಂದರು.

ಸಿಎಂಗೆ ಪತ್ರ ಬರೆದ ಡಿಕೆಶಿ

ಬೆಂಗಳೂರು: ಸರ್ಕಾರದಿಂದ ವಿತರಿಸುವ ದಿನಸಿ ಕಿಟ್​ಗಳ ಮೇಲೆ ಬಿಜೆಪಿ ನಾಯಕರ ಭಾವಚಿತ್ರ ಹಚ್ಚಲಾಗಿದೆ ಎಂದು ಕೆಪಿಸಿಸಿ ಆರೋಪಿಸಿದ್ದು, ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ. ಸರ್ಕಾರಿ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net