

ಬೆಂಗಳೂರು: ಮೇಕೆದಾಟು ಯೋಜನೆಗೆ ಅವಕಾಶ ನೀಡಿದರೆ ಸಂಕಷ್ಟದ ದಿನಗಳಲ್ಲಿ ತಮಿಳುನಾಡಿಗೆ ನೀರು ಹರಿಸುವುದಕ್ಕೆ ಅನುಕೂಲವಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನೀರು ಬಿಡುವಂತೆ ಆಗ್ರಹಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣದ ಆಧಾರದ ಮೇಲೆ ನಾವು ತಮಿಳುನಾಡಿಗೆ 10 ಟಿಎಂಸಿ ನೀರನ್ನು ಹರಿಸಲು ಬದ್ಧರಾಗಿದ್ದೇವೆ.
ನೀರು ಹರಿಸುವ ವಿಚಾರವಾಗಿ ಮಾತುಕತೆ ಮೂಲಕ ವಿವಾದವನ್ನು ಪರಿಹರಿಸಿಕೊಳ್ಳೋಣ ಎಂದು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಒಂದು ವೇಳೆ ನೀರಿನ ಸಂಗ್ರಹವಿದ್ದರೆ ಹರಿಸಲು ಸಿದ್ದರಾಗಿದ್ದೇವೆ. ಕಳೆದ ವರ್ಷ 400 ಟಿಎಂಸಿ ನೀರು ಸಮುದ್ರಕ್ಕೆ ಹರಿದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಅವಕಾಶ ನೀಡಿದರೆ ಸಂಕಷ್ಟದ ದಿನಗಳಲ್ಲಿ ನೀರು ಹರಿಸಲು ನಮಗೆ ಅನುಕೂಲವಾಗುತ್ತದೆ. ಆ ಯೋಜನೆ ತಮಿಳುನಾಡಿನವರಿಗಾಗಿ ರೂಪಿಸಿರುವುದು. ಅದನ್ನು ವಿರೋಧಿಸಬೇಡಿ ಯೋಜನೆಗೆ ಸಹಕರಿಸಿ ಎಂದು ಜಲಸಂಪನ್ಮೂಲ ಸಚಿವ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮಿಳುನಾಡು ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.