

ಹರಿಯಾಣ: ಹರಿಯಾಣದಲ್ಲಿ ವಿಶ್ವ ಹಿಂದೂ ಪರಿಷತ್ ರ್‍ಯಾಲಿ ವೇಳೆ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು ಗಲಭೆಯ ಪ್ರಮುಖ ಆರೋಪಿ ಸ್ವಯಂಘೋಷಿತ ಗೋರಕ್ಷಕ, ಬಜರಂಗದಳ ಸದಸ್ಯ ರಾಜ್ಕುಮಾರ್ ಅಲಿಯಾಸ್ ಬಿಟ್ಟು ಭಜರಂಗಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಹಿಂಸಾಚಾರ ನಡೆದ 20 ದಿನಗಳ ಬಳಿಕ ಪೊಲೀಸರು ಪ್ರಕರಣದ ಮಾಸ್ಟರ್ಮೈಂಡ್ನನ್ನು ಬಂಧಿಸಿದ್ದು, ಆರೋಪಿಯನ್ನು ಆತನ ಮನೆ ಬಳಿ ಪೊಲೀಸರು ವಶಕ್ಕೆ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೃತ್ತಿಯಲ್ಲಿ ಹಣ್ಣು-ತರಕಾರಿ ವ್ಯಾಪಾರಿಯಾಗಿರುವ ಬಿಟ್ಟು ಬಜರಂಗದಳದ ಸದಸ್ಯನಾಗಿದ್ದು, ಕಳೆದ ಮೂರು ವರ್ಷಗಳಿಂದ ಗೋರಕ್ಷಾ ಬಜರಂಗದಳ ಎಂಬ ಸಂಘಟನೆಯನ್ನು ಸಹ ನಡೆಸುತ್ತಿದ್ದಾನೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಕಳೆದ ತಿಂಗಳು ಈತನ ವಿರುದ್ಧ ಹರಿಯಾಣದ ಫರಿದಾಬಾದ್ನಲ್ಲಿ ಪ್ರಕರಣ ದಾಖಲಾಗಿತ್ತು.
ಈತನ ವಿರುದ್ಧ ಈಗಾಗಲೇ ಗಲಭೆ, ಹಿಂಸಾಚಾರ, ಬೆದರಿಕೆ, ಸರ್ಕಾರಿ ಅಧಿಕಾರಿಗಳ ಕತ್ಯವ್ಯಕ್ಕೆ ಅಡ್ಡಿಪಡಿಸುವುದು, ಮಾರಣಾಂತಿಕ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ. ನುಹ್ನಲ್ಲಿ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮಾರಿಸಿಕೊಂಡಿದ್ದ.
ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದ ಪೊಲೀಸ್ ಇಲಾಖೆ ಘಟನೆ ನಡೆದ 20 ದಿನಗಳ ಬಳಿಕ ಬಂಧಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸರನ್ನೂ ನೋಡುತ್ತಿದ್ದಂತೆ ಆರೋಪಿ ಓಡಿ ಹೋಗುತ್ತಿರುವುದು ಕಂಡು ಬರುತ್ತದೆ. ಈ ವೇಳೆ ಅಧಿಕಾರಿಗಳ ತಂಡ ಆತನ ಬೆನ್ನಟ್ಟಿದ್ದು, ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ.