'ಶಾಸಕ ಜಮೀರ್ ಅಹ್ಮದ್ ಒಬ್ಬ ರಾಷ್ಟ್ರದ್ರೋಹಿ, ಕಾಂಗ್ರೆಸ್ ತಪ್ಪಿನಿಂದಲೇ ಬೆಂಗಳೂರು ಹೊತ್ತಿ ಉರಿಯಿತು...'

jameer
Published on

ಶಿವಮೊಗ್ಗ: ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿನ ಗಲಭೆ ವಿಚಾರದಲ್ಲಿ ಕಾಂಗ್ರೆಸ್ ನಡೆ ಕುರಿತು ಸಚಿವ ಕೆ.ಎಸ್.ಈಶ್ವರಪ್ಪ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕ ಜಮೀರ್ ಅಹ್ಮದ್ ಒಬ್ಬ ರಾಷ್ಟ್ರದ್ರೋಹಿ ಎಂದ ಅವರು, ಕಾಂಗ್ರೆಸ್ ರಾಷ್ಟ್ರೀಯ ಮೌಲ್ಯವರ್ಧಿತ ರಾಜಕಾರಣ ಮಾಡದ ಪರಿಣಾಮ ಬೆಂಗಳೂರು ಹೊತ್ತಿ ಉರಿಯುತ್ತಿದೆ. ಮುಂದಿನ ದಿನಗಳಲ್ಲಿ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತಷ್ಟು ಅಧೋಗತಿಗೆ ಇಳಿಯಲಿದೆ ಎಂದು ಎಚ್ಚರಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ಏರ್ಪಡಿಸಿದ್ದ ಈಶ್ವರಪ್ಪ, 'ಶಾಸಕ ಜಮೀರ್ ಅಹ್ಮದ್ ಒಬ್ಬ ರಾಷ್ಟ್ರದ್ರೋಹಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಮುಸ್ಲಿಮರ ನಾಯಕತ್ವ ವಹಿಸಿಕೊಳ್ಳಲು ಮುಂದಾಗಿದ್ದಾರೆ. ಗಲಭೆಕೋರರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆಯೋ ವಿನಃ ರಾಷ್ಟ್ರಭಕ್ತರ ಮೇಲಲ್ಲ. ಅದನ್ನು ಜಮೀರ್ ಅಹ್ಮದ್ ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದರು.

ಶಾಸಕ ಅಖಂಡ ಶ್ರೀನಿವಾಸ್ ಅವರು ದೂರು ನೀಡಲ್ಲವೆಂದು ಹೇಳಿದ್ದಾರೆ. ಇದು ಗಲಭೆಕೋರರಿಗೆ ಮತ್ತಷ್ಟು ಬೆಂಬಲ ಸೂಚಿಸಿದಂತಾಗುತ್ತದೆ. ಕಾಂಗ್ರೆಸ್ ಸಹ ದೂರು ನೀಡಲು ಮುಂದಾಗಿಲ್ಲ. ಇಂತಹ ನೀಚ ರಾಜಕಾರಣವನ್ನು ಬಿಟ್ಟು ರಾಷ್ಟ್ರಿಯ ಮೌಲ್ಯದ ರಾಜಕಾರಣವನ್ನು ಕಾಂಗ್ರೆಸ್ ಮಾಡಬೇಕೆಂದು ಸಲಹೆ ನೀಡಿದರು.

ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಂಬಂಧಿ ನವೀನ್ ಬಿಜೆಪಿ ಕಾರ್ಯಕರ್ತ ಎಂದಿದ್ದ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಫೇಸ್‌ಬುಕ್ ಖಾತೆಯಲ್ಲಿ ಕಾಂಗ್ರೆಸ್ ಪರವಾಗಿರುವ ಪೋಸ್ಟ್‌ಗಳನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದರು. ಸ್ವತಃ ಅಖಂಡ ಶ್ರೀನಿವಾಸ್ ಅವರೇ ಯಾವ ಪಕ್ಷದಲ್ಲಿದ್ದ ಎಂಬುದು ತಿಳಿದಿಲ್ಲ ಎಂದಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಟೀಕಿಸಿದರು. ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಅತ್ಯಂತ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯಾದ್ಯಂತ ಎಸ್‌ಡಿಪಿಐ ನಿಷೇಧಿಸುವಂತೆ ಎಲ್ಲಡೆ ಒತ್ತಡ ಬರುತ್ತಿದೆ. ಅದರಂತೆ ಆ.20ರಂದು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಎರಡು ಆಯ್ಕೆಗಳಿದ್ದು ಉತ್ತರ ಪ್ರದೇಶ ಮಾದರಿಯಲ್ಲಿ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಹಾಗೂ ಎಸ್‌ಡಿಪಿಐ ಸೇರಿ ದೇಶ ವಿರೋಧಿ ಸಂಘಟನೆಗಳನ್ನು ನಿಷೇಧಿಸುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net