ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

Divorce Photoshoot
ನಟಿ ಶಾಲಿನಿಯ ಡೈವೋರ್ಸ್ ಫೋಟೋಶೂಟ್
Published on

ಬೆಂಗಳೂರು: ಮದುವೆಗೂ ಮುಂಚಿನ ಫೋಟೋಶೂಟ್​​ಗಳು ಬಹಳಷ್ಟು ಬಂದಿವೆ. ಚಿತ್ರ-ವಿಚಿತ್ರ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಕ್ಕಾಗಿಯೇ ಅಂಥ ಫೋಟೋಗಳು ವೈರಲ್ ಆಗಿವೆ. ಆದರೆ ಇಲ್ಲೊಂದು ಫೋಟೋಶೂಟ್​ ಅದರ ಮೂಲ ಉದ್ದೇಶದ ಕಾರಣಕ್ಕಾಗಿಯೇ ವೈರಲ್ ಆಗಿದೆ. ಅರ್ಥಾತ್, ಡೈವೋರ್ಸ್ ಆಗಿದ್ದನ್ನೂ ಸಂಭ್ರಮಿಸುವ ಕಾರಣಕ್ಕಾಗಿ ಮಾಡಿದ ಈ ಫೋಟೋಶೂಟ್​ ಈಗ ಹಲವರ ಗಮನ ಸೆಳೆದಿದೆ.

ಮಹಿಳೆಯೊಬ್ಬರು 'ಡೈವೋರ್ಸ್ಡ್' ಎಂಬ ಫಲಕ ಹಿಡಿದ, ಪತಿಯೊಂದಿಗೆ ಇದ್ದ ಫೋಟೋದಲ್ಲಿನ ಪತಿಯ ಮುಖದ ಭಾಗವನ್ನು ಹರಿದು ಪ್ರತ್ಯೇಕಿಸಿದ, ಪತಿ-ಪತ್ನಿ ಇಬ್ಬರೂ ಜೊತೆಗಿದ್ದ ಫೋಟೋವನ್ನು ಚಪ್ಪಲಿ ಕಾಲಿನಲ್ಲಿ ತುಳಿದು ಹೊಸಕಿ ಹಾಕಿದಂಥ ಫೋಟೋಗಳು ಈ ಫೋಟೋಶೂಟ್​ನ ಪ್ರಮುಖ ಆಕರ್ಷಣೆ ಎನಿಸಿಕೊಂಡಿವೆ. ಅಲ್ಲದೆ, 'ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!' ಎಂಬ ಫಲಕವನ್ನು ಹಿಡಿದು ಸಂತಸದಿಂದ ಬೀಗುವಂಥ ಫೋಟೋ ಮೂಲಕ 'ಪತಿ ಎಂಬ ಒಂದು ಸಮಸ್ಯೆಯನ್ನು ನಿವಾರಿಸಿಕೊಂಡಿದ್ದೇನೆ' ಎಂಬ ಸಂದೇಶವನ್ನೂ ಈಕೆ ಸಾರಿದ್ದಾರೆ.

ಅಂದಹಾಗೆ ಫ್ಯಾಷನ್ ಡಿಸೈನರ್ ಹಾಗೂ ನಟಿಯೂ ಆಗಿರುವ ಶಾಲಿನಿ ಎಂಬಾಕೆ ವಿಚ್ಛೇದನ ಪಡೆದಿದ್ದಕ್ಕೆ ಈ ರೀತಿಯ ವಿಶೇಷವಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಈಕೆ ಅದರಲ್ಲಿ ವಿಚ್ಛೇದಿತ ಮಹಿಳೆಯ ಸಂದೇಶವನ್ನೂ ತಿಳಿಸಿದ್ದು, ಅದು ಹೀಗಿದೆ.

ಧ್ವನಿ ಇಲ್ಲದವರಿಗೆ ವಿಚ್ಛೇದಿತ ಮಹಿಳೆಯ ಸಂದೇಶ

ಕೆಟ್ಟ ವಿವಾಹವನ್ನು ಬಿಡುವುದು ಸರಿ. ಏಕೆಂದರೆ ನೀವು ಸಂತೋಷವಾಗಿರಲು ಅರ್ಹರು ಮತ್ತು ಎಂದಿಗೂ ಸಣ್ಣತನದಲ್ಲಿ ನೆಲೆಸುವುದಿಲ್ಲ. ನಿಮ್ಮ ಜೀವನದ ಮೇಲೆ ನಿಯಂತ್ರಣ ಸಾಧಿಸಿ ಮತ್ತು ನಿಮಗಾಗಿ ಹಾಗೂ ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರಚಿಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಿ.

ವಿಚ್ಛೇದನವು ವೈಫಲ್ಯವಲ್ಲ!!! ಇದು ನಿಮಗೆ ಒಂದು ತಿರುವು ಮತ್ತು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತದೆ.

ಮದುವೆಯನ್ನು ತೊರೆದು ಏಕಾಂಗಿಯಾಗಿ ನಿಲ್ಲಲು ಸಾಕಷ್ಟು ಧೈರ್ಯ ಬೇಕು. ಆದ್ದರಿಂದ ನನ್ನ ಎಲ್ಲ ಧೈರ್ಯಶಾಲಿ ಮಹಿಳೆಯರಿಗೆ ನಾನು ಇದನ್ನು ಪ್ರೀತಿಯಿಂದ ಅರ್ಪಿಸುತ್ತೇನೆ.."

ಐರಿಸ್ ಫೋಟೋಗ್ರಫಿ ಎನ್ನುವ ಸಂಸ್ಥೆ ಈ ಫೋಟೋಶೂಟ್ ನಡೆಸಿದ್ದು, ವಿಚ್ಛೇದನವನ್ನೂ ಸಂಭ್ರಮಿಸುತ್ತಿರುವ ಈ ಮಹಿಳೆಯ ಫೋಟೋಗಳು ವೈರಲ್ ಆಗಲಾರಂಭಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net